

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆರ್‌ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು ದೆಹಲಿ ಮಸೀದಿಯಲ್ಲಿ (Mosque) ಮುಸ್ಲಿಂ ಮುಖಂಡರು ಹಾಗೂ ಧರ್ಮಗುರುಗಳೊಂದಿಗೆ ಸಭೆ ನಡೆಸಿದರು.
ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯ ಧರ್ಮಗುರು ಉಮರ್ ಅಹ್ಮದ್ ಇಲ್ಯಾಸಿ ಅವರ ಜೊತೆಗೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಗೌಪ್ಯ ಸಭೆ ನಡೆಸಿದರು. ಈ ಬಗ್ಗೆ ಧರ್ಮಗುರುಗಳ ಮಗ ಸುಹೈಬ್ ಇಲ್ಯಾಸಿ ಮಾತನಾಡಿ, ಇದು ದೇಶಕ್ಕೆ ಉತ್ತಮ ಸಂದೇಶವನ್ನು ರವಾನಿಸುತ್ತದೆ. ನಾವು ಕುಟುಂಬದಂತೆ ಚರ್ಚೆ ನಡೆಸಿದ್ದೇವೆ. ಅವರು ನಮ್ಮ ಆಹ್ವಾನದ ಮೇರೆಗೆ ಬಂದಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹಿಜಬ್ (Hijab) ವಿವಾದದ ಬಳಿಕ ಈ ಸಭೆಯು ಹೆಚ್ಚು ಮಹತ್ವವನ್ನು ಪಡೆದಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ದೇಗುಲದಲ್ಲಿ ಹಿಂದೂ ಪ್ರಾರ್ಥನೆಯನ್ನು ಕೋರಿದ ಮನವಿಯ ಬೆನ್ನಲ್ಲೇ ಪ್ರತಿ ಮಸೀದಿಯ ಕೆಳಗೆ ಶಿವಲಿಂಗವನ್ನು ಹುಡುಕುವ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದೆ.
75 ನಿಮಿಷಗಳ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಮಾತನಾಡಿ, ದೇಶದ ಪರಿಸ್ಥಿತಿಯ ಬಗ್ಗೆ ಆತಂಕವಿದೆ. ಅಸಮಾಧಾನದ ವಾತಾವರಣದಿಂದ ನನಗೆ ಸಂತೋಷವಿಲ್ಲ. ಇದು ಸಂಪೂರ್ಣವಾಗಿ ತಪ್ಪು. ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಅವರು ಆರ್‌ಎಸ್‍ಎಸ್ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು.