

ಕೋಲಾರ: ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತ ಕುಟುಂಬಕ್ಕೆ ಸೇರಿದ ಬಾಲಕನೋರ್ವ ಜನರು ದೇವರೆಂದು ಆರಾಧಿಸುವ ಮೂರ್ತಿ ಯನ್ನು ಮುಟ್ಟಿದಕ್ಕೆ, ಗ್ರಾಮಸ್ಥರು ಬೆದರಿಕೆ ಹಾಕಿರುವ ಆರೋಪವೊಂದು ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕನ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆ ಮೇಲ್ಜಾತಿಯ ಕೆಲವರಿಂದ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚೇತನ್ ಎಂಬ ಬಾಲಕನ ಕುಟುಂಬಕ್ಕೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಹುಳ್ಳೇರಹಳ್ಳಿ ಗ್ರಾಮದಲ್ಲಿ ದೇವಾಲಯವೊಂದನ್ನ ಪ್ರತಿಷ್ಟಾಪನೆ ಮಾಡಲಾಗಿತ್ತು. ಈ ಹಿನ್ನಲೆ ಗ್ರಾಮದಲ್ಲಿ ಭೂದೇವಿಯ ಉತ್ಸವ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ರು. ಉತ್ಸವದ ವೇಳೆ ದಲಿತ ಕುಟುಂಬಕ್ಕೆ ಸೇರಿದ ಚೇತನ್ ಎಂಬ ಯುವಕ ಉತ್ಸವದ ವೇಳೆ ಜನರು ದೇವರೆಂದು ಆರಾಧಿಸುವ ಮೂರ್ತಿ ಮುಟ್ಟಿದ ಎಂಬ ಆರೋಪದಡಿ ಆ ಬಾಲಕನ ಕುಟುಂಬಕ್ಕೆ 60 ಸಾವಿರ ದಂಡ ಕಟ್ಟುವಂತೆ ಮೇಲ್ಜಾತಿಯ ಕೆಲವರಿಂದ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೆ 60 ಸಾವಿರ ದಂಡ ಕಟ್ಟಿ ಇಲ್ಲವಾದಲ್ಲಿ ಗ್ರಾಮಕ್ಕೆ ಬರಬಾರದ ಎಂದು ಗ್ರಾಮದ ಮುಖಂಡರು, ಬಾಲಕನ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಹೊಸದಾಗಿ ಮಾಡಿದ್ದ ಉತ್ಸವ ಮೂರ್ತಿಯನ್ನ ಚೇತನ್ ತಲೆ ಮೇಲೆ ಹೊತ್ತುಕೊಳ್ಳಲು ಹೋದಾಗ ಗ್ರಾಮದ ಕೆಲವರು ಬೆದರಿಸಿ ಕಳಿಸಿದ್ದಾರೆ. ಇನ್ನು ದಲಿತ ಕುಟುಂಬಕ್ಕೆ ಸೇರಿರುವ ದಂಪತಿ ರಮೇಶ್, ಶೋಭಾ ಹಾಗೂ ಮಗ ಚೇತನ್ ಅವರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿರುವ ಹಿನ್ನಲೆ ಪೊಲೀಸರು ಸತ್ಯಾಸತ್ಯತೆಯ ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಇನ್ನು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಸದ್ಯಕ್ಕೆ ಈ ಕುರಿತು ಇನ್ನು ಯಾವುದೇ ಪ್ರಕರಣ ದಾಖಲಾಗಿಲ್ಲ.