

ಲಕ್ನೋ: ಮದರಸಾಗಳು ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಧ್ವಂಸಗೊಳಿಸುವಂತೆ ಕರೆ ನೀಡಿ ವಿವಾದ ಸೃಷ್ಟಿಸಿದ್ದ ಧರ್ಮಪ್ರಚಾರಕ ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಭಾನುವಾರ ನಡೆದ ಮಹಾಸಭೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲಿಗಡಕ್ಕೆ ಯತಿ ನರಸಿಂಹಾನಂದ ಆಗಮಿಸಿದ್ದರು. ಈ ವೇಳೆ ಉತ್ತರ ಪ್ರದೇಶ ಸರ್ಕಾರದಿಂದ ಮದರಸಾಗಳ ಕುರಿತಂತೆ ನಡೆಯುತ್ತಿರುವ ಸಮೀಕ್ಷೆಯ ಬಗ್ಗೆ ಮಾತನಾಡಿದ ಅವರು, ಮದರಸಾದಂತಹ ಸಂಸ್ಥೆ ಇರಬಾರದು. ಚೀನಾ ಮಾಡುವಂತೆ ಎಲ್ಲಾ ಮದರಸಾಗಳನ್ನು ಗನ್‍ಪೌಡರ್‌ನಿಂದ ಸ್ಫೋಟಿಸಬೇಕು. ಎಲ್ಲಾ ಮದರಸಾಗಳ ವಿದ್ಯಾರ್ಥಿಗಳನ್ನು ಶಿಬಿರಗಳಿಗೆ ಕಳುಹಿಸಬೇಕು. ಇದರಿಂದ ಅವರ ಮೆದುಳಿನಿಂದ ಕುರಾನ್ ಎಂಬ ವೈರಸ್ ಅನ್ನು ತೆಗೆದುಹಾಕಬಹುದು ಎಂದು ಹೇಳಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನಂತರ ಮದರಸಾಗಳಂತೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯವನ್ನು (ಎಎಂಯು) ಸ್ಫೋಟಗೊಳಿಸಬೇಕು. ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಬಂಧನ ಕೇಂದ್ರಗಳಿಗೆ ಕಳುಹಿಸಬೇಕು ಮತ್ತು ಅವರ ಮೆದುಳಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಭಯೋತ್ಪದನೆ ಬೆಂಬಲಿಸುವ ಹೇಳಿಕೆ ನೀಡಿದ್ದ.
ಯತಿ ನರಸಿಂಹಾನಂದ ಈತ ದ್ವೇಷಪೂರಿತ ಭಾಷಣ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹರಿದ್ವಾರದಲ್ಲೂ ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಬಿಡುಗಡೆ ಮಾಡಲಾಗಿತ್ತು.