

ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಇಂದು (ಸೋಮವಾರ) ಲಕ್ನೋದಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಅಧಿವೇಶನಕ್ಕೆ ‘ಪಾದಯಾತ್ರೆ’ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಇದಾದ ನಂತರ ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನದ ಮೊದಲ ದಿನವಾದ ಇಂದು ಲಕ್ನೋದ ಬೀದಿಗಳಲ್ಲಿ ಹೈಡ್ರಾಮಾ ನಡೆಯಿತು. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಶಾಸಕರು ಮತ್ತು ಎಂಎಲ್‌ಸಿಗಳೊಂದಿಗೆ ಹಜರತ್‌ಗಂಜ್ ಪ್ರದೇಶದ ಸಮಾಜವಾದಿ ಪಕ್ಷದ ಕಚೇರಿಯಿಂದ ಉತ್ತರ ಪ್ರದೇಶದ ಅಸೆಂಬ್ಲಿಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದರು. ಪೊಲೀಸರ ಕ್ರಮ ಖಂಡಿಸಿ ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಕೂಡಲೇ ಧರಣಿ ಸತ್ಯಾಗ್ರಹ ನಡೆಸಿದರು.
ಪಾದಯಾತ್ರೆ ಮತ್ತು ಪ್ರತಿಭಟನೆಗೆ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅನುಮತಿ ಪಡೆದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದಾರೆ. ಅವರನ್ನು ಇಲ್ಲಿ ತಡೆದು ನಿಲ್ಲಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಅವರಿಗೆ ಗೊತ್ತುಪಡಿಸಿದ ಮಾರ್ಗದಲ್ಲಿ ತೆರಳಿದರೆ ಸಂಚಾರ ದಟ್ಟಣೆಯ ಸಮಸ್ಯೆ ಇರುವುದಿಲ್ಲ” ಎಂದು ಜೆಟಿ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪಿಯೂಷ್ ಮೊರ್ಡಿಯಾ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಶಾಸಕರು ಮತ್ತು ಎಂಎಲ್‌ಸಿಗಳು ಇಂದು ಬೆಳಿಗ್ಗೆ ಎಸ್‌ಪಿ ಪ್ರಧಾನ ಕಚೇರಿಯಲ್ಲಿ ಜಮಾಯಿಸಿದ್ದರು. ಅಲ್ಲಿಂದ ಎಸ್‌ಪಿ ಮುಖ್ಯಸ್ಥ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಯುಪಿ ಅಸೆಂಬ್ಲಿಗೆ ಮೆರವಣಿಗೆ ಸಾಗಿತು. ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿ ಶಾಸಕರ ಗುಂಪು ಯುಪಿ ಅಸೆಂಬ್ಲಿ ಗೇಟ್ ನಂಬರ್ ಒಂದರಿಂದ ಪ್ರವೇಶಿಸಲು ನಿರ್ಧರಿಸಲಾಗಿತ್ತು.
ಈ ಪಾದಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶದ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷದ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲಾಗುವುದು ಎಂದಿದ್ದಾರೆ. ಉಪಮುಖ್ಯಮಂತ್ರಿ ಕೆಪಿ ಮೌರ್ಯ ಕೂಡ ಪ್ರತಿಕ್ರಿಯಿಸಿ, ಎಸ್‌ಪಿಯ ಪ್ರತಿಭಟನೆ ಸಾಮಾನ್ಯ ಜನರ ಅನುಕೂಲಕ್ಕೆ ಸಂಬಂಧಿಸಿಲ್ಲ. ಈ ಕುರಿತು ಚರ್ಚೆ ನಡೆಸಬೇಕಾದರೆ ವಿಧಾನಸಭೆಯಲ್ಲಿ ಮುಕ್ತವಾಗಿ ಚರ್ಚೆ ನಡೆಸಬಹುದು. ನಮ್ಮ ಸರ್ಕಾರ ಚರ್ಚೆಗೆ ಸಿದ್ಧವಿದೆ. ಸಮಾಜವಾದಿ ಪಕ್ಷ ಈಗ ನಿರುದ್ಯೋಗಿಯಾಗಿದೆ. ಅವರಿಗೆ ಮಾಡಲು ಏನೂ ಇಲ್ಲ. ಇಂತಹ ಪ್ರತಿಭಟನೆಗಳು ಜನರಿಗೆ ತೊಂದರೆಗಳನ್ನು ಮಾತ್ರ ಸೃಷ್ಟಿಸುತ್ತವೆ ಎಂದು ಟೀಕಿಸಿದ್ದಾರೆ.