

ನವದೆಹಲಿ:ವಿಶ್ವಾದ್ಯಂತ ಹಿಜಬ್‌ಗೆ(Hijab) ಮಾನ್ಯತೆ ಇದೆ, ಕರ್ನಾಟಕದಲ್ಲಿ(Karnataka) ಯಾಕಿಲ್ಲ? ಹಿಜಬ್ ನಿರ್ಬಂಧಿಸುವುದು ಎಷ್ಟು ಸರಿ ಎಂದು ಹಿಜಬ್ ಪರ ವಕೀಲರು ಪ್ರಶ್ನಿಸಿದ್ದಾರೆ.
ಶಾಲೆ ಮತ್ತು ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್(High Court) ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್(Supreme Court) ವಿಚಾರಣೆಗೆ ನಡೆಸುತ್ತಿದೆ. ಕಳೆದ ಐದು ದಿನಗಳಿಂದ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ.
ಇಂದು ಮೂವರು ವಕೀಲರು ಹಿಜಬ್ ಪರವಾಗಿ ವಾದ ಮಂಡಿಸಿದ್ದಾರೆ. ಮೊದಲು ವಾದ ಆರಂಭಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಪ್ರಕರಣ ಬಹಳ ಗಂಭೀರವಾಗಿದೆ. ಸಾಮಾಜಿಕ – ಆರ್ಥಿಕ ಮಾನದಂಡಗಳು ಮತ್ತು ವಿದ್ಯಾರ್ಥಿಗಳು ಹಿನ್ನೆಲೆಯನ್ನು ಇಲ್ಲಿ ಪರಿಗಣಿಸಬೇಕಾಗಿದೆ. ನಾನು ಓದುತ್ತಿದ್ದ ಕಾಲೇಜಿನಲ್ಲಿ ಹಿಜಬ್ ಧರಿಸದ ಮುಸ್ಲಿಂ ಸಹಪಾಠಿಗಳು ಇದ್ದರು. ಹಿಜಬ್ ಎನ್ನುವುದು ಒಂದು ಆಯ್ಕೆಯಾಗಿದ್ದು ಅದಕ್ಕೆ ಅನುಮತಿ ನೀಡಬೇಕಿದೆ. ಕೊಡವರಿಗೆ(Kodava) ಶಸ್ತ್ರಾಸ್ತ್ರಗಳನ್ನು(Arms) ಹೊಂದುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಈ ತೀರ್ಪು ನೀಡಿದೆ. ಧಾರ್ಮಿಕ ಹೋರಾಟ ಅಥವಾ ಸಾಂಸ್ಕೃತಿಕ ಹಕ್ಕಿನ ನಡುವಿನ ಇರುವುದು ತೆಳುವಾದ ಗೆರೆ ಮಾತ್ರ. ಇವುಗಳನ್ನು ಪ್ರತ್ಯೇಕಿಸುವುದು ಕಷ್ಟ. ಸಾರ್ವಜನಿಕ ಸುವ್ಯವಸ್ಥೆಗಾಗಿ ಹಿಜಬ್ ನಿಷೇಧಿಸಿ ಸರ್ಕಾರ ಆದೇಶ ಮಾಡಿದೆ. ಶಾಲೆಗಳಿಗೆ ಸಮವಸ್ತ್ರ ನಿರ್ಧರಿಸುವ ಅಧಿಕಾರ ನೀಡಿದೆ. ಹಿಜಬ್ ನಿಂದ ಯಾವ ಸುವ್ಯವಸ್ಥೆ ಹಾಳಾಗುತ್ತದೆ? ಹುಡುಗಿಯರು ಹಿಜಬ್ ಧರಿಸುವುದು ಸಾಮಾನ್ಯ ಎಂದರು.

ಬಳಿಕ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್(Rajeev Dhavan), ಉಡುಗೆ ತೊಡುಗೆಯ ಹಕ್ಕು ವಾಕ್ ಸ್ವಾತಂತ್ರ್ಯದ ಭಾಗವಾಗಿದೆ. ಇದು ಸಾರ್ವಜನಿಕ ಆದೇಶಕ್ಕೆ ಮಾತ್ರ ಒಳಪಟ್ಟಿರುತ್ತದೆ. ಈಗಾಗಲೇ ಉಲ್ಲೇಖಿಸಿರುವ ಪುಟ್ಟಸ್ವಾಮಿ ಮತ್ತು ನಲ್ಸಾ ಪ್ರಕರಣಗಳ ಆದೇಶದಂತೆ ಖಾಸಗಿತನ ಹಕ್ಕಾಗಿದೆ. ಹಿಜಬ್ ಧರಿಸಿದ ವ್ಯಕ್ತಿಯನ್ನು ಧರ್ಮ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ ಎಂದು ವಾದಿಸಿದರು.

ಈ ಪ್ರಕರಣವನ್ನು ಅದರ ಸರಿಯಾದ ದೃಷ್ಟಿಕೋನದಲ್ಲಿ ವಿಚಾರಣೆ ನಡೆಸಬೇಕು. ಇಂದು ಬಹುಸಂಖ್ಯಾತ ಸಮುದಾಯದಲ್ಲಿ ಇಸ್ಲಾಂ ಎಂದು ಬಂದಿದ್ದನ್ನು ಹೊಡೆದುರುಳಿಸುವ ಅತೃಪ್ತಿ ಬಹಳಷ್ಟಿದೆ. ನನ್ನ ಅರ್ಜಿದಾರರು ಕಾಲೇಜಿನಲ್ಲಿದ್ದು ಹಿಜಬ್ ಧರಿಸಿಯೇ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾಳೆ. ಪ್ರಪಂಚದಾದ್ಯಂತ ಹಿಜಬ್ ಅನ್ನು ಮಾನ್ಯವೆಂದು ಗುರುತಿಸಲಾಗಿದೆ. ಇದು ಲಿಂಗ ಮತ್ತು ಧಾರ್ಮಿಕ ಹಕ್ಕುಗಳನ್ನು ನಿರ್ಧರಿಸುವ ವಿಷಯವಾಗಿದೆ ಎಂದು ಕೋರ್ಟ್‌ಗೆ ತಿಳಿಸಿದರು.
ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅನುಮತಿ ಇದೆ. ಅದು ಕೇಂದ್ರಿಯ ವಿದ್ಯಾಲಯಕ್ಕೆ ಸಂಬಂಧಿಸಿದ ನಿರ್ಧಾರ ಎಂದು ಅವರು ಹೇಳುತ್ತಾರೆ. ಧರ್ಮ ಮತ್ತು ಅದರ ಆಚರಣೆಗಳನ್ನು ಅಗತ್ಯ ಭಾಗಗಳಲ್ಲ ಎಂದು ಹೇಳುವ ಅಧಿಕಾರ ಹೊರಗಿನವರಿಗಿಲ್ಲ. ಅಂತವುಗಳನ್ನು ನಿಷೇಧಿಸಲು ಜಾತ್ಯಾತೀತ ಸರ್ಕಾರ ಮುಕ್ತವಾಗಿಲ್ಲ. ಲಕ್ಷಾಂತರ ಮಹಿಳೆಯರು ಸ್ಕಾರ್ಫ್ ಧರಿಸುತ್ತಿದ್ದಾರೆ. ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಹೇಳಲು ಏನು ಸಮರ್ಥನೆ ಎಂದು ಪ್ರಶ್ನಿಸಿದರು.
ಸಮವಸ್ತ್ರ ನಿಯಮ ರೂಪಿಸುವಾಗ ಬುರ್ಖಾಗೆ ಅವಕಾಶ ನೀಡುವುದಿಲ್ಲ ಎಂದು ಹೇಳಬಹುದು. ಹಿಜಬ್ ನಿರ್ಬಂಧಿಸುವುದು ಎಷ್ಟು ಸರಿ? ಸಮವಸ್ತ್ರ ಬಣ್ಣದೇ ಹಿಜಬ್ ಧರಿಸಲಾಗುತ್ತಿದೆ ಎಂದು ವಾದ ಮಂಡಿಸಿದರು.