

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಎರಡು ವರ್ಷಗಳಿಂದ ಜೈಲಿನಲ್ಲಿರುವ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ರವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಲು ಒಪ್ಪಿದರೂ ಮತ್ತೊಂದು ಸವಾಲು ಕಪ್ಪನ್ ಅವರಿಗೆ ಎದುರಾಗಿದೆ. ಜಾರಿ ನಿರ್ದೇಶನಾಲಯದ (ಇ.ಡಿ.) ಮುಂದೆ ಅವರು ವಿಚಾರಣೆಗೆ ಒಳಗಾಗಬೇಕಿದೆ.
“ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿರುವ ಪ್ರಕರಣವು ಇನ್ನೂ ವಿಚಾರಣೆಗೆ ಬಾಕಿ ಇರುವ ಕಾರಣ ಲಕ್ನೋ ಜೈಲಿನಲ್ಲಿ ಸಿದ್ದಿಕ್ ಮುಂದುವರಿಯಲಿದ್ದಾರೆ” ಎಂದು ಕಾರಾಗೃಹ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದಿದ್ದ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಯುಯು ಲಲಿತ್ರವರು, ಕಪ್ಪನ್ರವರಿಗೆ ಜಾಮೀನು ನೀಡಲು ಒಪ್ಪಿದ್ದರು. ಯುಎಪಿಎ ಕುಣಿಕೆಯಿಂದ ಕೊಂಚ ಬಿಡಿಸಿಕೊಂಡು ನಿಟ್ಟುಸಿರು ಬಿಡಬೇಕೆನ್ನುವ ಹೊತ್ತಿನಲ್ಲಿ ಜಾರಿ ನಿರ್ದೇಶನಾಲಯದ ಸವಾಲುಗಳನ್ನು ಸಿದ್ದಿಕ್ ಎದುರಿಸಬೇಕಾಗಿದೆ.

ಕಪ್ಪನ್ ಬಳಿಯಿಂದ ಏನನ್ನು ವಶಪಡಿಸಿಕೊಂಡಿದ್ದೀರಿ? ಕಾರಿನಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ, ಅವನ ಬಳಿ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಹಾಗಿದ್ದ ಮೇಲೆ ಸ್ಪೋಟಕಗಳನ್ನು ಎಲ್ಲಿ ಬಳಸಿದರು ಎಂದು ಪ್ರಶ್ನಿಸಿದ ಲಲಿತ್ರವರು ಜಾಮೀನು ಮಂಜೂರು ಮಾಡಿದ್ದರು. ಮುಂದಿನ ಆರು ವಾರಗಳ ಕಾಲ ದೆಹಲಿ ಪೊಲೀಸರಿಗೆ ಮತ್ತು ಆನಂತರ ಕೇರಳ ಪೊಲೀಸರಿಗೆ ವರದಿ ಮಾಡಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ.
2020ರ ಅಕ್ಟೋಬರ್ 5 ರಂದು ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. 2020ರ ಸೆಪ್ಟೆಂಬರ್ 14 ರಂದು ಹತ್ರಾಸ್ನಲ್ಲಿ 19 ವರ್ಷದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡುವುದಾಕ್ಕಾಗಿ ಕಪ್ಪನ್ ಇತರ ಮೂವರೊಂದಿಗೆ ಕಾರಿನಲ್ಲಿ ಹತ್ರಾಸ್ಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದರು. ಅಂದಿನಿಂದ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.
ಸಿದ್ದಿಕ್ ಕಪ್ಪನ್ ನಿರಪರಾಧಿಯಾಗಿದ್ದು ಅವರು ಸಾಮರಸ್ಯ ಕದಡಲು ಯಾವುದೇ ವೇದಿಕೆಯನ್ನು ಬಳಸಿಲ್ಲ. ಕಪ್ಪನ್ ಅವರಿಗೆ ಮರೆಮಾಚಲು ಏನೂ ಇಲ್ಲ. ಅವರು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ನಾರ್ಕೋ ವಿಶ್ಲೇಷಣೆ ಅಥವಾ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಗಾಗಲು ಕೂಡಾ ತಯಾರು” ಎಂದು ನ್ಯಾಯಾಲಯದಲ್ಲಿ ಅವರ ಪರ ವಕೀಲರು ವಾದಿಸಿದ್ದರು.
ಕಪ್ಪನ್ ಮತ್ತು ಇತರ ಇಬ್ಬರೊಂದಿಗೆ ಬಂಧಿಸಲ್ಪಟ್ಟ ಕ್ಯಾಬ್ ಚಾಲಕನಿಗೆ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿತ್ತು.