

ದೆಹಲಿ: ಅಹಮದಾಬಾದ್ನಲ್ಲಿರುವ ಆಪ್ ಆದ್ಮಿ ಪಕ್ಷದ (Aam Aadmi Party – AAP) ಕಚೇರಿ ಮೇಲೆ ಗುಜರಾತ್ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. ಗುಜರಾತ್ನಲ್ಲಿ ಆಪ್ಗೆ ಸಿಗುತ್ತಿರುವ ಬೆಂಬಲದಿಂದ ಕಂಗಾಲಾಗಿರುವ ಬಿಜೆಪಿಯು ಸಲ್ಲದ ಕ್ರಮಗಳ ಮೂಲಕ ಪಕ್ಷವನ್ನು ಕಟ್ಟಿಹಾಕಲು ಯತ್ನಿಸುತ್ತಿದೆ ಎಂದು ಆಪ್ ಆರೋಪ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಹಮದಾಬಾದ್ ಭೇಟಿಯ ನಂತರ ಈ ದಾಳಿ ನಡೆದಿದೆ ಎಂದು ಆಪ್ ಪಕ್ಷದ ಗುಜರಾತ್ ಘಟಕವು ಟ್ವೀಟ್ ಮೂಲಕ ತಿಳಿಸಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ‘ಗುಜರಾತ್ ಪೊಲೀಸರಿಗೆ ಪಕ್ಷದ ಕಚೇರಿಯಲ್ಲಿ ಏನೂ ಸಿಗಲಿಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಪ್ರಾಮಾಣಿಕತೆಯು ಶಂಕಿಸಲು ಆಗದಷ್ಟು ಸ್ವಚ್ಛವಾಗಿದೆ’ ಎಂದು ಹೇಳಿದ್ದಾರೆ. ಆಪ್ ಪಕ್ಷದ ಆರೋಪದ ಬಗ್ಗೆ ಗುಜರಾತ್ ಪೊಲೀಸರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಗುಜರಾತ್ ಜನರಿಂದ ಆಪ್ಗೆ ಸಿಗುತ್ತಿರುವ ಬೆಂಬಲವು ಬಿಜೆಪಿಯಲ್ಲಿ ಅಭದ್ರತೆ ಹುಟ್ಟುಹಾಕಿದೆ. ಆಪ್ ಪರವಾದ ಅಲೆಯೇ ಬೀಸುತ್ತಿದೆ’ ಎಂದು ಅರವಿಂದ್ ಕೇಜ್ರಿವಾಲ್ ಹಿಂದಿಯಲ್ಲಿ ಮಾಡಿರುವ ಟ್ವೀಟ್ನಲ್ಲಿ ತಿಳಿಸಿದ್ದಾರೆ. ‘ದೆಹಲಿಯ ನಂತರ ಗುಜರಾತ್ನಲ್ಲಿ ದಾಳಿಗಳು ಆರಂಭವಾಗಿವೆ. ದೆಹಲಿಯಲ್ಲಿಯೂ ಅವರಿಗೆ ಏನೂ ಸಿಗಲಿಲ್ಲ, ಗುಜರಾತ್ನಲ್ಲಿಯೂ ಏನೂ ಸಿಗುವುದಿಲ್ಲ. ನಾವು ದೇಶಭಕ್ತ ಪ್ರಾಮಾಣಿಕ ಜನರಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.