

ಕಾಬೂಲ್: ಅಫ್ಘಾನಿಸ್ತಾನದ(Afghanistan) ರಾಜಧಾನಿ ಕಾಬೂಲ್‌ನಲ್ಲಿ ತಾಲಿಬಾನ್‌ನ(Taliban) ತರಬೇತಿಯ ವೇಳೆ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.
ತರಬೇತಿಗಾಗಿ ಬಂದಿದ್ದ ಅಮೆರಿಕದ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಐವರಿಗೆ ಗಾಯಗಳಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎನಾಯ್ತುಲ್ಲಾ ಖೌರಜ್ಮಿ ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್, ಅಮೆರಿಕದಿಂದ ನಿರ್ಮಿಸಲಾಗಿದ್ದ ಕೆಲವು ವಿಮಾನಗಳ ನಿಯಂತ್ರಣವನ್ನೂ ತೆಗೆದುಕೊಂಡಿತ್ತು. ಆದರೆ ಇದೀಗ ಅಫ್ಘಾನಿಸ್ತಾನದಲ್ಲಿ ಎಷ್ಟು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ಅಸ್ಪಷ್ಟವಾಗಿದೆ.
ಅಮೆರಿಕದ ಸೈನಿಕರು ವಾಪಸ್ ಆಗುವಾಗ ಅಫ್ಘಾನಿಸ್ತಾನದಲ್ಲಿದ್ದ ತಮ್ಮ ಮಿಲಿಟರಿ ಯಂತ್ರಾಂಶಗಳನ್ನು ಹಾನಿಗೊಳಿಸಿವೆ. ಯುಎಸ್ ಸೇನಾಪಡೆ ಹಿಂತಿರುಗಿದ ತಕ್ಷಣ ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಿತು. ಈ ಹಿನ್ನೆಲೆ ಅಫ್ಘಾನ್ ಪಡೆ ಕೆಲವು ಹೆಲಿಕಾಪ್ಟರ್‌ಗಳನ್ನು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಸ್ಥಳಾಂತರಿಸಿದೆ.