

ಗಾಂಧೀನಗರ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಆದರೀಗ 11 ಮಂದಿಯೂ ಗುಜರಾತ್‌ನ ರಂಧಿಕ್‍ಪುರ ಗ್ರಾಮದಿಂದ ಪರಾರಿಯಾಗಿದ್ದಾರೆ.
ತಮ್ಮ ಬಿಡುಗಡೆಗೆ ಬಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮತ್ತೆ ತಮ್ಮ ಮೇಲೆ ಹೊಸ ಪ್ರಕರಣ ದಾಖಲಿಸಬಹುದು ಎಂಬ ಭಯದಿಂದ ಗ್ರಾಮವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮನೆಯ ಮುಂದೆ ಕುಳಿತಿದ್ದರೆ, ಮಾರುಕಟ್ಟೆಗೆ ಹೋದರೆ ಅವರ ಫೋಟೋ ತೆಗೆದು ಹಾಕುತ್ತಿದ್ದರು. ಹೀಗಾಗಿ ಜೀವ ಭಯದಿಂದ 11 ಮಂದಿಯೂ ಗ್ರಾಮ ತೊರೆದಿದ್ದಾರೆ ಎಂದು ಕುಟುಂಬಸ್ಥರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
2002ರ ಗುಜರಾತ್ ಕೋಮುಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬಾನು ಅವರ 3 ವರ್ಷದ ಮಗು ಸೇರಿ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ 11 ಅಪರಾಧಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು ಆಗಸ್ಟ್ 15, 2022ರಂದು ಗುಜರಾತ್ ಸರ್ಕಾರ ಜೈಲು ಸಲಹಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ 11 ಜನರನ್ನು ಬಿಡುಗಡೆ ಮಾಡಿತ್ತು.
75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿಯೇ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
