

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮಂಗಳವಾರವಷ್ಟೇ ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ದಾಳಿ ನಡೆಸಿದ್ದ ಎನ್ಐಎ ತಂಡ ಇದೀಗ ಬಂಟ್ವಾಳ ತಾಲೂಕಿನಲ್ಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಹತ್ಯೆ ಪ್ರಕರಣದ ತೀವ್ರ ವಿಚಾರಣೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳ ತಂಡ, ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ಬೆಳ್ಳಂಬೆಳಗ್ಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿಯ ಪರ್ಲಿಯಾ ಎಂಬಲ್ಲಿನ ರಿಯಾಜ್ ಪರಂಗಿಪೇಟೆ ಮನೆ ಬಾಗಿಲು ತಟ್ಟಿದ ಎನ್ಐಎ ಅಧಿಕಾರಿಗಳು, ಮೊಬೈಲ್ ವಶಕ್ಕೆ ಪಡೆದು ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆ ಪ್ರಕರಣ ಸಂಬಂಧ ಮಂಗಳವಾರ ಬೆಳಗ್ಗೆ ಪುತ್ತೂರು ಹಾಗೂ ಸುಳ್ಯ ತಾಲೂಕಿನ 32 ಕಡೆಗಳಿಗೆ ದಾಳಿ ನಡೆಸಿದ್ದ ಅಧಿಕಾರಿಗಳು ಪರಿಶೀಲನೆ ನಡೆಸಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರು.
ಕಾರ್ಯಕರ್ತರಿಂದ ಗೋಬ್ಯಾಕ್ ಎನ್ಐಎ ಘೋಷಣೆ
ರಿಯಾಜ್ ಪರಂಗೀಪೇಟೆ ಮನೆಗೆ ದಾಳಿ ವಿಚಾರ ಸಂಬಂಧ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗುತ್ತಿದ್ದಾರೆ. ಬಿ.ಸಿ.ರೋಡ್ ಬಳಿಯ ಪರ್ಲಿಯಾ ಎಂಬಲ್ಲಿನ ರಿಯಾಜ್ ಪರಂಗಿಪೇಟೆ ನಿವಾಸದ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದು, ಬಂಟ್ವಾಳ ಪೊಲೀಸರು ಭದ್ರತೆ ನೀಡಿದ್ದಾರೆ.