

ನವದೆಹಲಿ: ಶಾಲಾ ವಿದ್ಯಾರ್ಥಿಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ಕೈದಿಗಳಿಗೆ ಹೋಲಿಸಿದೆ. ಜೈಲಿನಲ್ಲಿ ಕೈದಿಗಳಿಗೆ ಯಾವುದೇ ಹಕ್ಕುಗಳು ಇರುವುದಿಲ್ಲ, ಅದೇ ರೀತಿ ಶಾಲೆಗಳಿಗೆ ತೆರಳಿದಾಗ ಮಕ್ಕಳು ಶಿಕ್ಷಕರ ಕಸ್ಟಡಿಯಲ್ಲಿ ಇರುತ್ತಾರೆ. ಅವರಿಗೂ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಒಂದು ನ್ಯಾಯಾಂಗ ಸಂಸ್ಥೆಯಾಗಿ ಹೈಕೋರ್ಟ್ ಇದನ್ನೆಲ್ಲ ಹೇಗೆ ಹೇಳುತ್ತದೆ? ಎಂದು ಹಿರಿಯ ವಕೀಲ ದೇವದತ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ (Hijab Row) ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್ ಹಲವು ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ (Supreme Court) ಮುಂದಿಟ್ಟರು. ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಎರಡನೇ ದಿನದ ವಿಚಾರಣೆ ನಡೆಯಿತು. ವಕೀಲ ಕಾಮತ್ ಎರಡು ಗಂಟೆಗಳ ಕಾಲ ಸುದೀರ್ಘ ವಾದ ಮಂಡಿಸಿದರು.

ಬುರ್ಖಾ ಅಲ್ಲ, ಹಿಜಬ್ ಧರಿಸುತ್ತಿದ್ದಾರೆ
ವಿದ್ಯಾರ್ಥಿನಿಯರು ತರಗತಿಗಳಲ್ಲಿ ಧರಿಸುತ್ತಿರುವುದು ಬುರ್ಕಾ ಅಲ್ಲ, ಅವರು ಹಿಜಬ್ ಧರಿಸುತ್ತಿದ್ದಾರೆ. ಹಿಜಬ್ (Hijab) ಅಂದ್ರೆ ತಲೆಗೆ ಸುತ್ತಿಕೊಳ್ಳುವ ಒಂದು ಬಟ್ಟೆಯಾಗಿದೆ. ಇದು ಕಪ್ಪು ಸೇರಿ ಬೇರೆ ಬೇರೆ ಬಣ್ಣಗಳಲ್ಲಿ ಇರುತ್ತದೆ. ವಿದ್ಯಾರ್ಥಿನಿಯರು ಶಾಲೆಯಲ್ಲಿ ಸಮವಸ್ತ್ರ ಬಟ್ಟೆಯ ಬಣ್ಣದೇ ಹಿಜಬ್ ಧರಿಸುತ್ತಿದ್ದಾರೆ. ಅವರು ಸಮವಸ್ತ್ರ ಬಣ್ಣ ಬಿಟ್ಟು ಬೇರೆ ಬಣ್ಣದ ಬಟ್ಟೆ ಧರಿಸುತ್ತಿಲ್ವಲ್ಲ. ಇದರಲ್ಲಿ ನಿಯಮಗಳ ಉಲ್ಲಂಘನೆ ಏನಿದೆ ಎಂದು ಪ್ರಶ್ನಿಸಿದರು.
ಹಿಜಬ್ ವಿಚಾರದಲ್ಲಿ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ವಿದ್ಯಾರ್ಥಿನಿಯರು ಜೀನ್ಸ್ ಪ್ಯಾಂಟ್ ಹಾಕಿ ಕಾಲೇಜಿಗೆ ಬಂದಿರಲಿಲ್ಲ. ಯೂನಿಫಾರಂ ಹಾಕದೇ ಬಂದಿರಲಿಲ್ಲ. ಅಥವಾ ಬುರ್ಕಾ ಹಾಕಿ ತರಗತಿಗೆ ಹಾಜರಾಗಿರಲಿಲ್ಲ. ಕೇವಲ ಹೆಡ್ ಸ್ಕಾರ್ಫ್ ಹಾಕಿಕೊಂಡು ಬಂದಿದ್ದರು. ಇದನ್ನೇ ದೊಡ್ಡ ಅಪರಾಧವೆನ್ನುವಂತೆ ಸರ್ಕಾರ ಬಿಂಬಿಸಿದೆ. ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು ಕಸಿದುಕೊಂಡಿದ್ದಾರೆ. ಸಮವಸ್ತ್ರದ ಮಾದರಿಯ ಹೆಡ್ ಸ್ಕಾಫ್ ಹಾಕಿದ್ರೆ ತಪ್ಪೇನು ಎಂದು ಕೇಳಿದರು.
ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅವಕಾಶ
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಕೇಂದ್ರಿಯ ವಿದ್ಯಾಲಯಗಳಲ್ಲಿ ಹಿಜಬ್‌ಗೆ ಅವಕಾಶ ನೀಡಿದೆ. ಈವರೆಗೂ ಕೇಂದ್ರೀಯ ವಿದ್ಯಾನಿಲಯಗಳಲ್ಲಿ ನಿಯಮ ಬದಲಿಸಿಲ್ಲ. ಸಿಖ್‌ರಿಗೆ ಸಮವಸ್ತ್ರದ ಬಣ್ಣ ಟರ್ಬೈನ್‌ಗೆ ಅವಕಾಶ ನೀಡಿದೆ. ಅದೇ ರೀತಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಬಣ್ಣದ ಹಿಜಬ್ ಧರಿಸಲು ಅವಕಾಶ ನೀಡಿದೆ. ರಾಜ್ಯಗಳಲ್ಲಿ ಮಾತ್ರ ಹಿಜಬ್‌ಗೆ ಅವಕಾಶ ಯಾಕಿಲ್ಲ ಎಂದರು.
ಇದಕ್ಕೆ ಪೂರಕವಾಗಿ ಹಳೆ ಸುಪ್ರೀಂಕೋರ್ಟ್ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ಕಾಮತ್, ಬಿಜೋಯ್ ಇಮ್ಯಾನುವೆಲ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ಧರ್ಮವನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಹೋಗಬೇಕು ಎಂಬ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲು ಇಷ್ಟಪಡದ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಈ ಆದೇಶ ನೀಡಿತ್ತು. ರಾಷ್ಟ್ರಗೀತೆ ಹಾಡದಿದ್ದರೇ ದೇಶದ್ರೋಹವಲ್ಲ, ಆದರೆ ರಾಷ್ಟ್ರಗೀತೆಯ ವೇಳೆ ಎದ್ದು ನಿಲ್ಲಬೇಕು ಎಂದು ಕೋರ್ಟ್ ಹೇಳಿತ್ತು. ಈ ಆದೇಶ ಪ್ರಕಾರ ಧಾರ್ಮಿಕ ನಂಬಿಕೆಗಳನ್ನು ಶಾಲೆಯಲ್ಲಿ ಪಾಲಿಸಬಹುದು. ಈ ಆದೇಶದ ಅನ್ವಯ ಶಾಲೆಯಲ್ಲಿ ವಿದ್ಯಾರ್ಥಿನಿಯರು ಧಾರ್ಮಿಕ ನಂಬಿಕೆ ಪಾಲಿಸಬಹುದು ಎಂದರು.
ದಕ್ಷಿಣ ಆಫ್ರಿಕಾ ಕೋರ್ಟ್ ಮೂಗುತಿಗೆ ಅವಕಾಶ ಕೊಟ್ಟಿತ್ತು
ದಕ್ಷಿಣ ಆಫ್ರಿಕಾದ ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಶಾಲಾ ನಿಯಮಗಳಿಗೆ ವಿರುದ್ಧವಾಗಿ ಶಾಲೆಯಲ್ಲಿ ಮೂಗುತಿ ಧರಿಸಲು ತಮಿಳು ಹಿಂದೂ ವಿದ್ಯಾರ್ಥಿನಿಗೆ ದಕ್ಷಿಣ ಆಫ್ರಿಕಾದಲ್ಲಿ ನಿರಾಕರಿಸಲಾಗಿತ್ತು. ಆ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಳು. ಆಕೆಗೆ ದಕ್ಷಿಣ ಆಫ್ರಿಕಾದ ಸಂವಿಧಾನದ ಪ್ರಕಾರ ಮೂಗುತಿ ಧರಿಸಲು ಕೋರ್ಟ್ ಅವಕಾಶ ನೀಡಿತು. ಅಲ್ಲದೆ ಅಮೆರಿಕಾ, ಕೆನಡಾ ಸೇರಿದಂತೆ ಹಲವು ದೇಶದ ಪೂರಕ ಆದೇಶಗಳನ್ನು ಪ್ರಸುತ್ತ ಪಡಿಸಿದರು.
ಸಾಮಾನ್ಯವಾಗಿ ಮಹಿಳೆಯರು ಸ್ಕಾಫ್ ಹಾಕಿಕೊಳ್ಳುತ್ತಾರೆ ಈ ರೀತಿಯ ಸಮಸ್ಯೆಗಳು ಎದುರಾದಾಗ ನ್ಯಾಯಾಲಯವು ಹೇಗೆ ವ್ಯವಹರಿಸುತ್ತದೆ ಎಂಬುದಕ್ಕೆ ಸ್ಪಷ್ಟವಾದ ಆದೇಶಗಳಿದೆ. ಇದು ಸಮುದಾಯದ ನಂಬಿಕೆಯಾಗಿದ್ದರೆ, ಒಬ್ಬ ಜಾತ್ಯತೀತ ನ್ಯಾಯಾಧೀಶರು ನಂಬಿಕೆಯನ್ನು ಒಪ್ಪಿಕೊಳ್ಳಲು ಬದ್ಧರಾಗಿರುತ್ತಾರೆ. ಅವರಿಗೆ ಈ ಬಗ್ಗೆ ತೀರ್ಪು ನೀಡುವ ಯಾವುದೇ ಹಕ್ಕಿಲ್ಲ.
ಬಿಂದಿ, ಮೂಗುತಿ ಕೂಡಾ ಒಂದು ಧಾರ್ಮಿಕ ಗುರುತು. ಮಹಿಳೆಯರು ಉತ್ತಮ ಸದ್ಗುಣಗಳನ್ನು ವೃದ್ಧಿಪಡಿಸಲು ಮತ್ತು ಸಮೃದ್ಧಿ ತರಲು ಮೂಗುತಿಯನ್ನು ಧರಿಸುತ್ತಾರೆ ಎನ್ನುವ ಧಾರ್ಮಿಕ ನಂಬಿಕೆಗಳಿವೆ. ಈ ನಂಬಿಕೆ ಸರಿ ತಪ್ಪು ಎನ್ನುವುದು ಬೇರೆ ಚರ್ಚೆ. ಅದೇ ರೀತಿ ಹಿಜಬ್ ಕೂಡಾ ಒಂದು ಧಾರ್ಮಿಕ ನಂಬಿಕೆಯಾಗಿದೆ.
ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ ದೇವದತ್ ಕಾಮತ್, ವಿದ್ಯಾರ್ಥಿಗಳ ಸಮವಸ್ತ್ರ ಹೊರತಾಗಿ ಹಲವು ಧಾರ್ಮಿಕ ಗುರುತುಗಳೊಂದಿಗೆ ಶಾಲೆಗೆ ತೆರಳುತ್ತಾರೆ. ಹಣೆ ಮೇಲೆ ನಾಮ ಹಾಕಲಾಗುತ್ತೆ, ರುದ್ರಾಕ್ಷಿ ಧರಿಸಲಾಗುತ್ತೆ, ಕ್ರಿಶ್ಚಿಯನ್ ಕೊರಳಲ್ಲಿ ಕ್ರಾಸ್ ಹಾಕಿಕೊಳ್ತಾರೆ. ಇವು ಎಲ್ಲವೂ ಧಾರ್ಮಿಕ ಗುರುತುಗಳು ಎಂದರು. ಇದಕ್ಕೆ ಮತ್ತೆ ಪ್ರಶ್ನೆ ಮಾಡಿದ ನ್ಯಾಯಾಧೀಶರು, ರುದ್ರಾಕ್ಷಿ, ಕ್ರಾಸ್ ಯೂನಿಫಾರಂ ಒಳಗಿರುತ್ತದೆ. ಅದನ್ನು ಗುರುತಿಸಲು ಇಲ್ಲಿ ಯಾರೂ ಶರ್ಟ್ ತೆಗೆಯುತ್ತಿಲ್ಲ. ಅದು ಹೇಗೆ ಸಮವಸ್ತ್ರ ನಿಯಮ ಉಲ್ಲಂಘನೆಯಾಗುತ್ತದೆ ಎಂದರು.
ಕೋರ್ಟ್ ಸಮಯ ಅಂತ್ಯವಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11:30 ಕ್ಕೆ ವಿಚಾರಣೆ ಮುಂದೂಡಲಾಯಿತು. ಈ ವೇಳೆ ಮಧ್ಯಪ್ರವೇಶ ಮಾಡಿದ ಮತ್ತೋರ್ವ ವಕೀಲರು ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಿಸಿದ ಆದೇಶದ ಬಗ್ಗೆ ವಾದಿಸಲು ಮುಸ್ಲಿಂ ವಿದ್ವಾಂಸರೊಬ್ಬರು ಇಚ್ಛಿಸಿದ್ದಾರೆ, ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಕೋರ್ಟ್ ಅನುಮತಿ ನೀಡಿದೆ