

ಒಂದು ಕಾಲದಲ್ಲಿ ಯುವತಿಯರು ತಂದೆ-ತಾಯಿ ತೋರಿಸಿದ ಹುಡುಗನನ್ನು ಕಣ್ಮುಚ್ಚಿ ಮದುವೆಯಾಗಿಬಿಡುತ್ತಿದ್ದರು. ಕಷ್ಟನೋ ಸುಖನೋ ಹೊಂದಿಕೊಂಡು ಬಾಳುತ್ತಿದ್ರು. ಆದರೆ ಕಾಲ ಈಗ ಮೊದಲಿನಂತಿಲ್ಲ. ಪ್ರತಿ ಹೆಣ್ಣು ತನಗೆ ಇಷ್ಟವಾಗುವ ಹೊಂದಿಕೊಳ್ಳುವ, ಸೂಕ್ತ ಎನಿಸುವ ಗಂಡಿನ ಹುಡುಕಾಟದಲ್ಲಿರುತ್ತಾಳೆ ಮತ್ತು ಅಂಥವರನ್ನೇ ಮದುವೆಯಾಗಲು ಬಯಸುತ್ತಾಳೆ. ಮೊದಲಿನ ಹಾಗೆ ತಂದೆ ತಾಯಿ ನೋಡಿದ ಹುಡುಗಗನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವುದಿಲ್ಲ. ವೈವಾಹಿಕ ಜೀವನ ನಾವು ಹೇಗೆ ಬಯಸಿದ್ದೇವೋ ಹಾಗೆ ನಡೆಯಬೇಕು ಎಂಬ ನಿರ್ಧಾರ. ಹೀಗಾಗಿ ಪೋಷಕರು ಮಗಳ ಮದುವೆಗೆ ಮುನ್ನ ಮದುವೆ ಕುರಿತು ಮಗಳ ನಿರ್ಧಾರ ಏನು ಎಂಬ ಬಗ್ಗೆಯೂ ಯೋಚಿಸಬೇಕು. ಅವಳ ಅಭಿಪ್ರಾಯ ತಿಳಿದುಕೊಳ್ಳಬೇಕು. ಇವಳು ನಮ್ಮ ಮಗಳು ನಾವು ತೋರಿಸಿದ ಹುಡುಗನನ್ನು ನಿರಾಕರಿಸುವುದಿಲ್ಲ. ಮದುವೆಯಾಗುತ್ತಾಳೆ ಎಂದು ಭಾವಿಸಿ, ಮಗಳನ್ನು ಕೇಳದೇ ಪೋಷಕರಿಗೆ ಒಪ್ಪಿಗೆಯಾಗುವ ಹುಡುಗನೊಂದಿಗೆ ಮದುವೆ ಮಾಡಿಸಿದರೆ ಮುಂದೆ ಏನಾಗುತ್ತದೆ ಎಂಬುದಕ್ಕೆ ಈ ದುರಂತ ಘಟನೆ ಒಂದು ನಿದರ್ಶನ.

ಇಷ್ಟವಿಲ್ಲದ ಮದುವೆಗೆ ನೊಂದು ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ಕೇವಲ ಹದಿನೈದು ದಿನಗಳ ಹಿಂದೆ ಮದುವೆಯಾಗಿತ್ತು. ಆದರೆ ಈ ಮದುವೆ ಇಷ್ಟವಿಲ್ಲದ ಕಾರಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಶ್ಮಿ ವಿಶ್ವಕರ್ಮ(24) ಆತ್ಮಹತ್ಯೆ ಮಾಡಿಕೊಂಡಿರುವ ನವವಿವಾಹಿತೆ. ಆರು ತಿಂಗಳ ಹಿಂದೆ ಗಂಜಿಮಠ ಮೂಲದ ದುಬೈನಲ್ಲಿ ಇಂಜಿನೀಯರ್ ಆಗಿರುವ ಸಂದೀಪ್ ಜತೆಗೆ ನಿಶ್ಚಿತಾರ್ಥವಾಗಿತ್ತು. ಕಳೆದ ಆಗಸ್ಟ್ 21ರಂದು ಅದ್ದೂರಿಯಾಗಿ ವಿವಾಹವಾಗಿತ್ತು. ಆದರೆ ಕೇವಲ ಹದಿನೈದು ದಿನದೊಳಗೆ ಇಷ್ಟವಿಲ್ಲದ ಮದುವೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಔತಣಕೂಟದಲ್ಲಿ ಭಾಗಿಯಾಗಿದ್ದ ರಶ್ಮಿ ಎಲ್ಲರೊಂದಿಗೆ ಓಡಾಡಿಕೊಂಡಿದ್ದಳು. ಆದರೆ ರಶ್ಮಿ ಅದೇ ದಿನ ಇಲಿಪಾಷಣ ಸೇವಿಸಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ರಶ್ಮಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. ರಶ್ಮಿಯ ಆತ್ಮಹತ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಒಲ್ಲದ ಮದುವೆಯೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.