

ಬೆಳಗಾವಿ: ಜಿಲ್ಲೆಯ ನೇಗಿನಹಾಳ ಗ್ರಾಮದ ಮಠದಲ್ಲಿ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ ಮಠದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇಬ್ಬರು ಮಹಿಳೆಯರ ನಡುವಿನ ಟೆಲಿಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುರುಘಾ ಮಠದ ಶಿವಾಚಾರ್ಯ ಅವರ ಮೇಲಿನ ಅತ್ಯಾಚಾರ ಆರೋಪದ ಕುರಿತು ಇಬ್ಬರು ಮಹಿಳೆಯರು ಮಾತನಾಡುತ್ತಿದ್ದರು. ರಾಜ್ಯದ ಹಲವು ಮಠಾಧೀಶರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಒಂದು ಮಹಿಳೆ ಸಂಭಾಷಣೆಯಲ್ಲಿ ಆರೋಪಿಸುತ್ತಾರೆ. ಆ ಸಂಭಾಷಣೆಯ ನಡುವೆ ಬಸವಸಿದ್ಧಲಿಂಗ ಸ್ವಾಮಿಯವರ ಹೆಸರನ್ನು ಮಹಿಳೆ ಉಲ್ಲೆಖಿಸುತ್ತಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣದಿಂದಲೇ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಯಾವ ಕಾರಣ ನೀಡಿದ್ದಾರೆ ಎಂಬುದನ್ನು ಪೊಲೀಸರು ಇನ್ನೂ ಮಾಹಿತಿ ನೀಡಿಲ್ಲ.

ಮಹಿಳೆಯರ ಸಂಭಾಷಣೆಯಲ್ಲಿ ಏನಿದೆ?:
ಮಠದ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಮೇಲೆ ಚಿತ್ರದುರ್ಗ ಮುರುಘಾ ಶರಣರ ಬಂಧನವಾಗಿರುವ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ನಡುವಿನ ಸಂಭಾಷಣೆ ವೈರಲ್ ಆಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾವಿಧಾರಿಗಳ ಬಗ್ಗೆ ನಾನಾ ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಮಧ್ಯೆ ಕರ್ನಾಟಕದ ಹಲವು ಮಠದ ಸ್ವಾಮೀಜಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸುವ ಆಡಿಯೋ ವೈರಲ್ ಆಗಿದೆ.
ಇಬ್ಬರು ಹೆಂಗಸರು ಪರಸ್ಪರ ಮಾತನಾಡಿಕೊಂಡಿರುವ ಆಡಿಯೋ ಇದಾಗಿದ್ದು, ಕರ್ನಾಟಕದ ಹಲವು ಸ್ವಾಮೀಜಿಗಳ ಮೇಲೆ ಆರೋಪಿಸಿದ್ದಾರೆ. ರಾಜ್ಯದ ಹಲವು ಮಠಗಳ ಸ್ವಾಮೀಜಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ ಎಂದು ಮಹಿಳೆಯರಿಬ್ಬರ ಮಾತನಾಡಿರುವ ಆಡಿಯೋದಲ್ಲಿದೆ.
ಬೆಳಗಾವಿಯ ಸತ್ಯಕ್ಕ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಗಂಗಾವತಿಯ ಇನ್ನೊಬ್ಬ ಮಹಿಳೆ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಹೆಣ್ಮಕ್ಳನ್ನ ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವ ರಾಜ್ಯದ ಮಠಗಳು, ಶ್ರೀಗಳ ಹೆಸರುಗಳನ್ನು ಸಹ ಬಹಿರಂವಾಗಿ ಹೇಳಿಕೊಂಡಿದ್ದಾಳೆ.