

ಲಖನೌ(ಸೆ.03): ಅನಧಿಕೃತ, ಅಕ್ರಮ ಮದರಸಾಗಳನ್ನು ಪತ್ತೆ ಹಚ್ಚಲು ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸರ್ಕಾರದ ಹೊಸ ಆದೇಶ ನೀಡಿದೆ. ಈ ಮದರಸಾಗಳಲ್ಲಿರುವ ಮಕ್ಕಳು, ಶಿಕ್ಷಕರು, ಪಠ್ಯ, ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಲು ಸೂಚಿಸಿದೆ. ಸಣ್ಣ ನಿಯಮ ಉಲ್ಲಂಘನೆ ಮಾಡಿರುವ ಮದರಸಾಗಳ ಮೇಲೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಆದೇಶ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಣ್ಣು ಕೆಂಪಾಗಿಸಿದೆ. ಮದರಸಾಗಳ ಮೇಲೆ ಸಮೀಕ್ಷೆ ಮಾಡಿ ಕ್ರಮ ಕೈಗೊಳ್ಳುವ ಸರ್ಕಾರ, ಮಠ ಹಾಗೂ ಗುರುಕಲದ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದೆ. ಆರ್‌ಎಸ್ಎಸ್ ಸಂಘಟನೆ ಕೇಂದ್ರಿತ ಬಿಜೆಪಿ ಸರ್ಕಾರ ಒಂದು ಧರ್ಮದ ಪರ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದವರನ್ನು ಒಂದೇ ರೀತಿ ನೋಡುತ್ತಿಲ್ಲ. ಕೇಂದ್ರದ ಬಿಜೆಪಿ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮುಸ್ಲಿಮರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಮುಸ್ಲಿಮರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಈ ರೀತಿಯ ಸಮೀಕ್ಷೆ, ದಾಳಿಗಳು ನಡೆಯುತ್ತಿದೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆರೋಪಿಸಿದೆ.

ಬಿಜೆಪಿ ಆಡಳಿತದ ರಾಜ್ಯದಲ್ಲಿ ಮುಸ್ಲಿಮರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದೆ. ಬಿಜೆಪಿ (BJP)ಸರ್ಕಾರದ ಹಿಂದಿರುವ ಆರ್‌ಎಸ್ಎಸ್(RSS) ಇದಕ್ಕೆ ಕಾರಣ. ಒಂದು ಧರ್ಮದ ಪರ ಕೆಲಸ ಮಾಡುವ ಸಂಘಟನೆಯಿಂದ ಬಂದ ನಾಯಕರು ಅಲ್ಪಸಂಖ್ಯಾತ ಸಮುದಾಯದ ಅದರಲ್ಲೂ ಮುಸ್ಲಿಂ ಸಮುದಾಯವನ್ನು(Muslim community) ಇದೇ ರೀತಿ ನಡೆಸಿಕೊಳ್ಳುತ್ತದೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡ್(AIMPLB) ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಆರೋಪಿಸಿದ್ದಾರೆ.
ಸಣ್ಣ ಸಣ್ಣ ಹಾಗೂ ಸಾಮಾನ್ಯ ನಿಯಮ ಉಲ್ಲಂಘನೆಗಳಿಗೆ ಮದರಸಾದ( madrassas) ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಗುರುಕುಲ, ಮಠದ(Gurukula, Mutt) ಮೇಲೆ ಸಮೀಕ್ಷೆ ಮಾಡಿ ಅನಧಿಕೃತ ಅಕ್ರಮವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(UP CM Yogi adityanath) ಯಾಕೆ ಮುಂದಾಗಿಲ್ಲ ಎಂದು ರಹಮಾನಿ ಪ್ರಶ್ನಿಸಿದ್ದಾರೆ. ಮದರಸಾ ನಿಯಮ ಉಲ್ಲಂಘಿಸಿದರೆ ಬುಲ್ಡೋಜರ್ ಮೂಲಕ ಕೆಡವಲಾಗುತ್ತಿದೆ. ಯೋಗಿ ಸರ್ಕಾರ ಸರ್ಕಾರ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.