

ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಭದ್ರತೆ ಪರಿಶೀಲಿಸಿದರು. ಭದ್ರತೆಗಾಗಿ ಸುಮಾರು 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಸೆ. 2) ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರು ಕೂಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
3 ಸಾವಿರ ಪೊಲೀಸರ ನಿಯೋಜನೆ: ಪ್ರಧಾನಮಂತ್ರಿ ಅವರ ಭದ್ರತಾ ಕಾರ್ಯಕ್ಕಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ನಗರ ಪೊಲೀಸರು, ವಿವಿಧ ಜಿಲ್ಲೆಗಳ ಪೊಲೀಸರು, ಎಎನ್ಎಫ್, ಕೆಎಸ್ಆರ್ಪಿ ಪೊಲೀಸರು ಸೇರಿದಂತೆ 3 ಸಾವಿರ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಡಿಜಿಪಿ, ಎಡಿಜಿಪಿ ಸೇರಿದಂತೆ 100 ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಭದ್ರತೆ ಪರಿಶೀಲನೆ ನಡೆಸಿದರು. ಎಡಿಜಿಪಿ ಅಲೋಕ್ ಕುಮಾರ್ ಅವರು ವೇದಿಕೆ ಸ್ಥಳದಲ್ಲಿ ಪೊಲೀಸರು ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ನಿರ್ದೆಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಪ್ರಧಾನಿಯವರ ಭದ್ರತೆಗೆ ಬೇಕಾಗಿರುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕೆಎಸ್ಆರ್ಪಿ, ಸಿಎಐಆರ್, ಡಿಐಆರ್, ಆರ್ಎಎಫ್, ಗರುಡ ಪಡೆ ಸೇರಿದಂತೆ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಭದ್ರತೆಯಲ್ಲಿ ಯಾವ ಲೋಪವಾಗದಂತೆ ಮುತುವರ್ಜಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್: ಪ್ರಧಾನಿ ಕಾರ್ಯಕ್ರಮಕ್ಕೆ ಗೋಲ್ಡ್ ಪಿಂಚ್ ಸಿಟಿಯ 25 ಎಕರೆ ಪ್ರದೇಶದಲ್ಲಿ ಜರ್ಮನ್ ತಂತ್ರಜ್ಞಾನದ ಬೃಹತ್ ಪೆಂಡಾಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಸಮಾವೇಶ ನಡೆಯುವ ಸ್ಥಳದಲ್ಲಿ ಸಾವಿರಾರು ಕಾರ್ಮಿಕರಿಂದ ಕೆಲಸ ಕಾರ್ಯ ನಡೆಯುತ್ತಿದ್ದು, ಮೈದಾನದ ಸುತ್ತ ತಡೆ ಬೇಲಿ ಅಳವಡಿಕೆ ಕಾರ್ಯ ಆಗುತ್ತಿದೆ. ಸ್ಟೀಲ್ ಶೀಟ್ಗಳ ಮೇಲೆ ಬಿಳಿ ಬಟ್ಟೆ ಹಾಕಿ ತಡೆಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.