

ನವದೆಹಲಿ(ಆ.30): ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಈದ್ಗಾ ಮೈದಾನದಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಹಿಂದೂ ಸಂಘಟನೆಗಳ ಗಣೇಶೋತ್ಸವ ಆಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ವಕ್ಫ್ ಬೋರ್ಡ್ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಇಲ್ಲಿಯವರೆಗೆ ಮುಸ್ಲಿಂ ಸಮುದಾಯ ರಂಜಾನ್ ಸೇರಿದಂತೆ 2 ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಅದೇ ಸ್ಥಿತಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹಿಂದೂ ಸಂಘಟನೆಗಳು ಬೇರೆ ಕಡೆ ಗಣೇಶೋತ್ಸವ ಆಚರಣೆ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಇದುವರೆಗೆ ಯಾವ ವಿಧಾನದಲ್ಲಿ ಆಚರಣೆಗಳು ನಡೆಯುತ್ತಿದೆಯೋ ಅದೆ ರೀತಿಯಲ್ಲಿ ಮುಂದುವರಿಯಲಿ. 200 ವರ್ಷಗಳಿಂದ ಇಲ್ಲದ ಗಣೇಶೋತ್ಸವ ಈಗ ಈದ್ಗಾ ಮೈದಾನದಲ್ಲಿ ಯಾಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಮುಸ್ಲಿಂ ಅಸೋಸಿಯೇಷನ್ ಆಫ್ ಕರ್ನಾಟಕ, ಕರ್ನಾಟಕ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಇಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ನ್ಯಾ.ಹೇಮಂತ್ ಗುಪ್ತಾ ಹಾಗು ಶುಧಾಂಶು ಧುಲಿಯಾ ದ್ವಿಸದಸ್ಯ ಪೀಠದ ವಿಚಾರಣೆಯಲ್ಲಿ ಭಿನ್ನ ಅಭಿಪ್ರಾಯಗಳು ಮೂಡಿ ಬಂದಿತ್ತು. ಹೀಗಾಗಿ ದ್ವಿಸದಸ್ಯ ಪೀಠ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿತ್ತು. ಸುಪ್ರೀಂ ಕೋರ್ಟ್ ಮುಖ್ಯನ್ಯಾಯೂರ್ತಿ ಯುಯು ಲಲಿತ್ ಈ ಪ್ರಕರಣವನ್ನು ವಿಚಾರಣೆ ನಡೆಸಲು ಜಸ್ಟೀಸ್ ಇಂದಿರಾ ಬ್ಯಾನರ್ಜಿ, ಎಸ್ ಓಕಾ ಹಾಗೂ ಎಂಎಸ್ ಸುಂದರೇಶ್ ಅವರಿದ್ದ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದರು.