

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಎಲ್ಲ ಪ್ರಕರಣ ರದ್ದು ಮಾಡಿದ ಸುಪ್ರೀಂಕೋರ್ಟ್, ಎಲ್ಲಾ ಪ್ರಕರಣ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ನವದೆಹಲಿ (ಆ. 30): 1992ರ ಬಾಬರಿ ಮಸೀದಿ ಧ್ವಂಸ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯಿಂದ ಬಳಿಕ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ. ಈ ಪ್ರಕರಣಗಳು ಈಗ ಕಾಲಾನಂತರದಲ್ಲಿ ನಿರುಪಯುಕ್ತವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ಮುಗಿದಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಒಂದು ಪ್ರಕರಣದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ. ಇಷ್ಟು ವರ್ಷಗಳ ಬಳಿಕವೂ ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಾಗಾಗಿ ಇವುಗಳ ವಿಚಾರಣೆಯನ್ನು ಅಂತ್ಯ ಮಾಡುತ್ತಿರುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯುಯು ಲಿಲಿತ್ ಅವರಿದ್ದ ಪೀಠ ಮಂಗಳವಾರ ತೀರ್ಪು ನೀಡಿದೆ. ಗುಜರಾತ್ ಗಲಭೆಗೆ ಸಂಬಂಧಿಸಿದ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇವೆ. ಗುಜರಾತ್ ಗಲಭೆಗೆ ಸಂಬಂಧಿಸಿದ 9 ಪ್ರಕರಣಗಳಲ್ಲಿ 8 ಪ್ರಕರಣಗಳಲ್ಲಿ ಕೆಳ ನ್ಯಾಯಾಲಯಗಳು ತೀರ್ಪು ನೀಡಿವೆ ಎಂದು ಈ ನ್ಯಾಯಾಲಯ ಹೇಳಿದೆ. ನರೋಡಾ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ಪ್ರತ್ಯೇಕವಾಗಿ ಕೇಳುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಪ್ರಧಾನಿಗೆ ನೀಡಿದ ಕ್ಲೀನ್ ಚಿಟ್ ಅನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್: ಪ್ರಧಾನಿ ಮೋದಿ ವಿರುದ್ಧ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜೂನ್ 24 ರಂದು ವಜಾಗೊಳಿಸಿತ್ತು. 2002ರ ಗುಜರಾತ್ ಗಲಭೆಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಎಸ್‌ಐಟಿ ವರದಿಯ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಝಾಕಿಯಾ ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಗುಜರಾತ್‌ನಲ್ಲಿ 2002ರ ಫೆಬ್ರವರಿ 27 ರಂದು ಗೋಧ್ರಾ ಹತ್ಯಾಕಾಂಡದ ನಂತರ, ಗುಜರಾತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತು. ಪೂರ್ವ ಅಹಮದಾಬಾದ್‌ನ ಅಲ್ಪಸಂಖ್ಯಾತ ಸಮುದಾಯದ ವಸಾಹತು ‘ಗುಲ್ಬರ್ಗ್ ಸೊಸೈಟಿ’ಯನ್ನು ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿದ್ದರು. ಇದರಲ್ಲಿ ಝಕಿಯಾ ಜಾಫ್ರಿ ಅವರ ಪತಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 38 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಜಾಫ್ರಿ ಸೇರಿದಂತೆ 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.ಬಾಬ್ರಿ ಮಸೀದಿ ಕೇಸ್ ಕೂಡ ಕ್ಲೋಸ್: ಇನ್ನು ಬಾಬ್ರಿ ಮಸೀದಿ ಧ್ವಂಸದ ಎಲ್ಲಾ ಪ್ರಕರಣವನ್ನೂ ಸುಪ್ರೀಂ ಕೋರ್ಟ್ ಮುಕ್ತಾಯ ಮಾಡಿದೆ. ಅದರೊಂದಿಗೆ ಉಮಾಭಾರತಿ, ಮುರಳಿ ಮನೋಹರ್ ಜೋಶಿ, ಸಾಧ್ವಿ ರಿತಂಬರ, ವಿನಯ್ ಕಟಿಯಾರ್ ಹಾಗೂ ಇತರರ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಬೆನ್ನಲ್ಲಿಯೇ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿತ್ತು.