


ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Murugha Shivamurthy Swamiji) ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ಮೂರು ದಿನಗಳು ಕಳೆದಿವೆ. ಪ್ರಕರಣ ದಾಖಲಾದ ನಂತರ ಸಂತ್ರಸ್ತೆಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ವೈದ್ಯಕೀಯ ಪರೀಕ್ಷೆ ಸಹ ನಡೆಸಲಾಗಿದೆ.
ಸದ್ಯದವರೆಗೂ ಸಿಆರ್ಪಿಸಿ ಸೆಕ್ಷನ್ 164 ಅಡಿ ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಾಗಿಲ್ಲ. ಸೋಮವಾರ ಸ್ಥಳದ ಮಹಜರು ಹಿನ್ನೆಲೆ ಹೇಳಿಕೆ ದಾಖಲಿಸಲು ವಿಳಂಬವಾಯ್ತು ಎನ್ನೋ ಮಾಹಿತಿ ಪೊಲೀಸರು ನೀಡಿದ್ದಾರೆ. ಇಂದು ಹೇಳಿಕೆ ದಾಖಲಿಸಲು ನ್ಯಾಯಾಧೀಶರು ಸಮಯ ನೀಡಿದ್ದಾರೆ.
ಮಕ್ಕಳು ಚಿತ್ರದುರ್ಗಕ್ಕೆ ತೆರಳಿದ ನಂತರದ ಕ್ಷಣದಿಂದಲೂ ಒಡನಾಡಿ ಸಂಸ್ಥೆ ತನಿಖಾಧಿಕಾರಿಗಳ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದೆ. ಪ್ರಕರಣದ ತನಿಖೆ ಮತ್ತು ವಿಧಾನಗಳು ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಪೊಲೀಸರು ಮಾಡಿದ ಎಡವಟ್ಟು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಹೌದು, ನಿನ್ನೆ ಪೊಲೀಸರು ಬಾಲಕಿಯರಿಬ್ಬರನ್ನು ಸ್ಥಳ ಮಹಜರು ಮಾಡಲು ಮುರುಘಾ ಮಠಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪ್ರಕರಣದ ಎ1 ಆರೋಪಿ ಶಿವಮೂರ್ತಿ ಸ್ವಾಮೀಜಿ ಮಠದಲ್ಲಿಯೇ ಇದ್ದರು.
ಆರೋಪಿಯ ಉಪಸ್ಥಿತಿಯಲ್ಲಿಯೇ ಸ್ಥಳದ ಮಹಜರು ನಡೀತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದು ಮಕ್ಕಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.
ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಯ ಬಂಧನವಾಗದೆ ಇರುವಾಗ ಸಂತ್ರಸ್ತರನ್ನ ಆತ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಬಹುದಾ? ಇದ್ರಿಂದಾಗಿ ಸಂತ್ರಸ್ತರ ಮೇಲೆ ಪ್ರಭಾವ ಬೀರುವುದಿಲ್ಲವಾ? ಪೊಲೀಸರು ಯಾವ ರೀತಿಯ ಕಾನೂನು ಪಾಲನೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಆರೋಪಿಯನ್ನ ಬಂಧನ ಮಾಡದೇ ಅವರದ್ದೇ ಸಮ್ಮುಖದಲ್ಲಿ ಮಹಜರು ಮಾಡಿದ್ದಾರೆ. ಆ ಮೂಲಕ ಪೋಕ್ಸೋ ಕಾಯ್ದೆಯ ಉದ್ದೇಶವನ್ನೇ ಪೊಲೀಸರು ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿವೆ.
ಪೋಕ್ಸೋ ಕಾಯ್ದೆಯ ಪ್ರಕಾರ ಸಂತ್ರಸ್ತ ಮಕ್ಕಳ ಮೇಲೆ ಯಾವುದೇ ಒತ್ತಡ ಹಾಕದೇ ಮಾಹಿತಿ ಪಡೆದುಕೊಳ್ಳಬೇಕು. ಆದ್ರೆ ಇಲ್ಲಿ ಆರೋಪಿ ಇರುವ ಸ್ಥಳಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.