

ದುಬೈ: ಏಷ್ಯಾಕಪ್ ಕ್ರಿಕೆಟ್ ಸಂದರ್ಭದಲ್ಲಿ ಭಾರತ, ಪಾಕಿಸ್ತಾನ ಪಂದ್ಯದ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತ್ರಿವರ್ಣ ಧ್ವಜವನ್ನು ಹಿಡಿಯಲು ನಿರಾಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಪಾಂಡ್ಯ ಸಿಕ್ಸ್ ಹೊಡೆದು ಪಂದ್ಯವನ್ನು ಗೆಲ್ಲಿಸಿಕೊಟ್ಟ ಬಳಿಕ ಭಾರತದ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಈ ವೇಳೆ ವಿಐಪಿ ಗ್ಯಾಲರಿಯಲ್ಲಿದ್ದ ಜಯ್ ಶಾ ಚಪ್ಪಾಳೆ ಹೊಡೆದರು. ಈ ಸಂದರ್ಭದಲ್ಲಿ ಜಯ್ ಶಾ ಅವರಿಗೆ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜವನ್ನು ನೀಡಿದರು. ಆದರೆ ಜಯ್ ಶಾ ತ್ರಿವರ್ಣ ಧ್ವಜ ಬೇಡ ಎಂದು ಹೇಳಿ ತೆಗೆದುಕೊಳ್ಳಲು ನಿರಾಕರಿಸಿದರು.

ಜಯ್ ಶಾ ಅವರು ತ್ರಿವರ್ಣ ಧ್ವಜವನ್ನು ತೆಗೆದುಕೊಳ್ಳಲು ನಿರಾಕರಿಸಿದ ವೀಡಿಯೋ ಪ್ರಸಾರವಾಗಿತ್ತು. ಈ ವೀಡಿಯೋವನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜಯ್ ಶಾ ವಿರುದ್ಧ ಕಿಡಿಕಾರುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ “ನನ್ನ ಬಳಿ ಅಪ್ಪ ಇದ್ದಾರೆ. ತ್ರಿವರ್ಣ ಧ್ವಜ ನಿಮ್ಮ ಬಳಿಯೇ ಇಟ್ಟುಕೊಳ್ಳಿ” ಎಂದು ಬರೆದು ಜೈರಾಂ ರಮೇಶ್ ಅವರ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದೆ
ರಾಜ್ಯಸಭಾ ಸದಸ್ಯೆ ಮತ್ತು ಶಿವಸೇನೆಯ ನಾಯಕಿಯಾಗಿರುವ ಪ್ರಿಯಾಂಕ್ ಚತುರ್ವೇದಿ, ಎಸಿಸಿ ಅಧ್ಯಕ್ಷರಾಗಿ ನೀವು ತಟಸ್ಥವಾಗಿರಬೇಕು ಎಂದು ಮಾತ್ರಕ್ಕೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಿಲ್ಲ ಎಂದು ಬರೆದು ಟೀಕಿಸಿದ್ದಾರೆ.