

ಪ್ರಧಾನಿ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದು, ಈ ವೇಳೆ ನಗರದ ಹೊರವಲಯದಲ್ಲಿ ಇರುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಮಾವೇಶ ಆಯೋಜನೆಯಾಗಿದೆ. ಮೋದಿ ಭಾಷಣ ನೀಡಲಿರುವ ಮೈದಾನದ ಬಳಿ ಶೆಡ್ ಮನೆಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯಗಳನ್ನು ಜಿಲ್ಲಾ ಪೊಲೀಸರು ಸ್ಥಳಾಂತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ನೀಡಿದ ನೋಟಿಸ್ನಲ್ಲಿ ಮುಂಜಾಗೃತ ಕ್ರಮವಾಗಿ ಯಾವುದೇ ಚಟುವಟಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳಲಾಗಿದೆ.

ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಕೂಳೂರು ಪೊಲೀಸರು ಬಂಗ್ರಕೂಳೂರು ಪ್ರದೇಶಕ್ಕೆ ತೆರಳಿ ಅಲ್ಲಿ ಶೆಡ್ ಹಾಕಿಕೊಂಡು ಬದುಕು ಸಾಗಿಸುತ್ತಿದ್ದ ಒಂಬತ್ತು ಅಲೆಮಾರಿ ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಅವರಿಗೆ ಸಮರ್ಪಕವಾದ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕುಟುಂಬಗಳು ಆರೋಪಿಸಿದ್ದು, ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಸುಮಾರು 30ಕ್ಕೂ ಅಧಿಕ ಮಂದಿ ಬೀದಿ ಪಾಲಾಗಿದ್ದಾರೆ.
ಕೊಲೆ ಬಸವ ಆಡಿಸುವ ಸಮುದಾಯಕ್ಕೆ ಸೇರಿರುವ ತಾವು ಕಳೆದ 8 ರಿಂದ 9 ವರ್ಷಗಳಿಂದ ಶೆಡ್ ಹಾಕಿಕೊಂಡು ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಪ್ರಸ್ತುತ ಸಮಾವೇಶ ನಡೆಯಲಿರುವ 1 ಕಿ.ಮೀ. ದೂರದಲ್ಲಿ ಇರುವ ಈ ಸಮುದಾಯದ ಶೆಡ್ಗಳಲ್ಲಿ 9 ಕುಟುಂಬಗಳು ವಾಸಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ. ಇದೀಗ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆ ನೆಪ ಮಾಡಿಕೊಂಡು ಅಲೆಮಾರಿ ಸಮುದಾಯಗಳನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಾವೂರು ಪೊಲೀಸರು ಹೊರಡಿಸಿರುವ ನೋಟಿಸ್ನಲ್ಲಿ,“ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ಪ್ರಯುಕ್ತ ಮುಂಜಾಗರೂಕತಾ ಕ್ರಮವಾಗಿ ಕಾರ್ಯಕ್ರಮ ನಡೆಯುವ ಪರಿಸರದಲ್ಲಿ ನಿಗಾ ಇಡಬೇಕಾದ ಕಾರಣ, ಸೆಪ್ಟೆಂಬರ್ 2ರವರೆಗೆ ಸಂಬಂಧಪಟ್ಟ ಕಟ್ಟಡದಲ್ಲಿ ಯಾವುದೇ ಚಟುವಟಿಕೆ ಸ್ಥಗಿತಗೊಳಿಸಲು ಈ ಮೂಲಕ ಕೋರಲಾಗಿದೆ” ಎಂದು ಕಾವೂರು ಠಾಣೆಯ ಇನ್ಸ್ಪೆಕ್ಟರ್ ಸಹಿಯೊಂದಿಗೆ ಶೇಡ್ನಲ್ಲಿ ವಾಸಿಸುವ ನಿವಾಸಿಗಳಿಗೆ ನೀಡಲಾಗಿದೆ.
‘ಪುಧಾನಿ ಬರುವಾಗ ನಿಮ್ಮ ಶೆಡ್ ಅವರಿಗೆ ಕಾಣಿಸಬಾರದು’
“ನಿನ್ನೆ ರಾತ್ರಿ ಮತ್ತು ಇಂದು ಬೆಳಗ್ಗೆ ಪೊಲೀಸರು ಬಂದು ಬೆತ್ತ ತೋರಿಸಿ ಬೇಗ ತೆರವುಗೊಳಿಸಬೇಕು ಎಂದು ಏರಿದ ಧ್ವನಿಯಲ್ಲಿ ಹೇಳಿದ್ದಾರೆ. ಇಲ್ಲದಿದ್ದರೆ ನಿಮ್ಮನ್ನೆಲ್ಲ 15 ದಿನಗಳ ಕಾಲ ಬಂಧನದಲ್ಲಿಡಲಾಗುವುದು ಎಂದು ಬೆದರಿಸಿದ್ದಾರೆ” ಎಂದು ಅಲೆಮಾರಿ ಸಮುದಾಯದ ಜನರು ಹೇಳಿದ್ದಾರೆ.
“ಪ್ರಧಾನಿ ಬರುವಾಗ ನಿಮ್ಮ ಶೆಡ್ಗಳು ಅವರಿಗೆ ಕಾಣಿಸಬಾರದು. ಬೇಗನೇ ಟೆಂಟುಗಳನ್ನು ತೆರವುಗೊಳಿಸಿ ಎನ್ನುತ್ತಾ ಒತ್ತಾಯ ಪೂರ್ವಕವಾಗಿ ನಮ್ಮ ಟೆಂಟ್ಗಳನ್ನೆಲ್ಲಾ ಬಿಚ್ಚಿಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಬಾಣಂತಿ, ಸಣ್ಣ ಮಕ್ಕಳಿದ್ದಾರೆ
“ನಾವು ಮೂಲತಃ ಆಂಧ್ರಪ್ರದೇಶದವರಾಗಿದ್ದು, ಕಳೆದ 8 ರಿಂದ 9 ವರ್ಷದಿಂದ ಇಲ್ಲಿ ಶೆಡ್ ಹಾಕಿಸಿಕೊಂಡು ಬದುಕು ಸಾಗಿಸುತ್ತಿದ್ದವು. ನಮ್ಮಲ್ಲಿ ಬಾಣಂತಿಯರು ಸೇರಿದಂತೆ ಸಣ್ಣ ಮಕ್ಕಳು ಕೂಡಾ ಇದ್ದಾರೆ. ಏಕಾಏಕಿ ನಮ್ಮನ್ನು ಇಲ್ಲಿಂದ ಎಬ್ಬಿಸಿದ್ದಾರೆ. ಬೇರೆ ವ್ಯವಸ್ಥೆಯನ್ನೂ ಮಾಡಿಲ್ಲ. ಹಾಗಾಗಿ ನಾವೀಗ ಬೀದಿ ಪಾಲಾಗಿದ್ದೇವೆ” ಎಂದು ಮೀರೇಶ್ ಎಂಬವರು ನೋವು ತೋಡಿಕೊಂಡಿದ್ದಾರೆ.
“ನಮ್ಮ ಸಾಮಗ್ರಿಗಳನ್ನು ಇಡಲು ಸ್ಥಳೀಯ ವ್ಯಕ್ತಿಯೊಬ್ಬರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ನಮಗೆ ಇನ್ನೂ ಉಳಿದುಕೊಳ್ಳಲು ವ್ಯವಸ್ಥೆ ಆಗಿಲ್ಲ” ಎಂದು ಅವರು ಹೇಳಿದ್ದಾರೆ.