

ನವದೆಹಲಿ (ಆ.29): ದೇಶ-ವಿದೇಶಗಳಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದ್ದ, ಉಡುಪಿಯಲ್ಲಿ ಆರಂಭವಾಗಿ ನಂತರ ರಾಜ್ಯಾದ್ಯಂತ ಸಂಘರ್ಷ ಸೃಷ್ಟಿಸಿದ್ದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ. ಸುಮಾರು ಮೂರೂವರೆ ತಿಂಗಳ ಬಳಿಕ ವಿಚಾರಣೆ ನಡೆಯುತ್ತಿದೆ. ಹಿಜಾಬ್ ವಿಚಾರವಾಗಿ ಹೈಕೋರ್ಟ್ ನಲ್ಲಿ ನೀಡಿರುವ ತೀರ್ಪಿನ ವಿರುದ್ಧ ಒಟ್ಟು 23 ಅರ್ಜಿ ಸಲ್ಲಿಕೆಯಾಗಿದೆ. ಉಡುಪಿಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿನಿಯರು ಹಿಜಾಬ್ಗೆ ತರಗತಿಯಲ್ಲಿ ನಿರ್ಬಂಧ ವಿಧಿಸಿದ ಕಾಲೇಜಿನ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಚ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಚ್ ಶಾಲಾ, ಕಾಲೇಜಿನ ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿತ್ತು. ಅಲ್ಲದೆ, ಹಿಜಾಬ್ ಧಾರಣೆ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದೂ ವ್ಯಾಖ್ಯಾನಿಸಿತ್ತು. ಹೈಕೋರ್ಚ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿಗಳು ಸುಪ್ರೀಂ ಕೋರ್ಚ್ ಮೊರೆ ಹೋಗಿದ್ದರು. ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷಕ್ಕೆ ಕಾರಣವಾಗಿತ್ತು. ನಂತರ ಇದು ಜಾತ್ರೆ, ದೇವಸ್ಥಾನಗಳ ಮಳಿಗೆಗಳಿಗೂ ವಿಸ್ತರಿಸಿ, ಧರ್ಮ ಸಂಘರ್ಷ ಸೃಷ್ಟಿಹಾಕಿತ್ತು.

ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ಪೀಠದಲ್ಲಿ ಹಿಜಾಬ್ ಕುರಿತ ಅರ್ಜಿಯ ವಿಚಾರಣೆ ನಡೆಯಲಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಇದೀಗ ಮೂರು ತಿಂಗಳ ಬಳಿಕ ಸುಪ್ರೀಂಕೋರ್ಟ್ ನಲ್ಲಿ ಹಿಜಾಬ್ ಕುರಿತ ಅರ್ಜಿ ವಿಚಾರಣೆ ನಡೆಯಲಿದೆ.