
ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗಿವೆ. ಅಮೃತ ಮಹೋತ್ಸವದ (Amrit Mahothsav) ಸಂಭ್ರಮದಲ್ಲಿರುವ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಕಾರಣೀಕರ್ತರಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೆಲ್ಲರಿಗೂ ಭಾರತ ಕೃತಜ್ಞವಾಗಿದೆ ಎಂದಿದ್ದಾರೆ. ‘ಆಜಾದಿಯ ಅಮೃತ ಮಹೋತ್ಸವ’ದ ಸಂದರ್ಭದಲ್ಲಿ ನಾವು ನಮ್ಮ ಅನೇಕ ರಾಷ್ಟ್ರನಾಯಕರನ್ನು ಸ್ಮರಿಸಿದ್ದೇವೆ. ಆಗಸ್ಟ್ 14ರಂದು ನಾವು ದೇಶದ ವಿಭಜನೆಯ ಭೀಕರತೆಯನ್ನು ನೆನಪಿಸಿಕೊಂಡಿದ್ದೇವೆ. ಕಳೆದ 75 ವರ್ಷಗಳಲ್ಲಿ ನಮ್ಮ ದೇಶವನ್ನು ಮುನ್ನಡೆಸಲು ಕೊಡುಗೆ ನೀಡಿದ ದೇಶದ ಎಲ್ಲಾ ನಾಗರಿಕರನ್ನು ಇಂದು ನೆನಪಿಸಿಕೊಳ್ಳುವ ದಿನವಾಗಿದೆ ಎಂದು ಮೋದಿ ಹೇಳಿದ್ದಾರೆ.

ಮಂಗಲ್ ಪಾಂಡೆ, ತಾತ್ಯಾ ಟೋಪೆ, ಭಗತ್ ಸಿಂಗ್, ಸುಖದೇವ್, ರಾಜಗುರು, ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಬ್ರಿಟಿಷರ ಆಳ್ವಿಕೆಯ ಬುನಾದಿಯನ್ನೇ ಬುಡಮೇಲು ಮಾಡಿದ ನಮ್ಮ ಅಸಂಖ್ಯಾತ ಕ್ರಾಂತಿಕಾರಿಗಳಿಗೆ ಈ ರಾಷ್ಟ್ರ ಕೃತಜ್ಞವಾಗಿದೆ. ದೇಶಕ್ಕಾಗಿ ಜೀವವನ್ನೇ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ನಮ್ಮ ದೇಶದ ಜನರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್ ಮುಂತಾದ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಭಾರತ ಹೆಮ್ಮೆಯಿಂದ ಬೀಗುತ್ತದೆ ಎಂದು ನರೇಂದ್ರ ಮೋದಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ, ಬಲಿದಾನವನ್ನು ಮೋದಿ ನೆನಪಿಸಿಕೊಂಡಿದ್ದಾರೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಅಥವಾ ದೇಶವನ್ನು ಕಟ್ಟಿದವರಾದ ಡಾ. ರಾಜೇಂದ್ರ ಪ್ರಸಾದ್, ನೆಹರೂ, ಸರ್ದಾರ್ ಪಟೇಲ್, ಎಸ್ಪಿ ಮುಖರ್ಜಿ, ಎಲ್ಬಿ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೆಪಿ ನಾರಾಯಣ್, ಆರ್ಎಂ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯ ಭಾರತಿ ಅವರಂತಹ ಮಹಾನ್ ವ್ಯಕ್ತಿಗಳ ಮುಂದೆ ತಲೆಬಾಗಬೇಕಾದ ದಿನವಿದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತ ತನ್ನ 75 ವರ್ಷಗಳ ಪ್ರಯಾಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದೆ ಎಂದು ಮೋದಿ ಹೇಳಿದ್ದಾರೆ.
