
‘ವಸುದೈವ ಕುಟುಂಬಕಂ’, ಎಂಬ ಮೂಲಮಂತ್ರವನ್ನು ಸಾರಿದ, ವಿಶ್ವಗುರು ನಮ್ಮ ಭಾರತ.

‘ಒಗ್ಗಟ್ಟಿನಲ್ಲಿ ಬಲವಿದೆ’, ಎಂಬ ಮಾತಿನಂತೆ, ದೇಶದ ಆಸ್ತಿಯಾದ ಕೋಟ್ಯಂತರ ಜನಸಂಖ್ಯೆಯು ಒಟ್ಟುಗೂಡಿ, ಈ ಅನಿಷ್ಠ ಭಯೋತ್ಪಾದನೆ ಹಾಗೂ ಒಳಗೊಳಗಿನ ವೈಮನಸ್ಯವೇರ್ಪಡಿಸುವ ಕುಚೋದನೆ, ಪಿತೂರಿಗಳನ್ನು ಹಿಮ್ಮೆಟ್ಟಬೇಕು. ಜನಮನದ ಒಡಲೊಳಗಿನ ದ್ವೇಷದ ಕಿಚ್ಚನ್ನು ಅಳಿಸಿ, ಎಲ್ಲರ ಮನದಲ್ಲಿ ಸಾಮರಸ್ಯದ ಹೂವು ಅರಳುವಂತಾಗಲಿ.
ದೇಶದ ವಿಷಯ ಬಂದಾಗ, ಉಳಿದ ಎಲ್ಲ ಮನಸ್ತಾಪಗಳನ್ನು ಪಕ್ಕಕ್ಕಿಟ್ಟು ದೇಶದ ರಕ್ಷಣೆಯೇ ಮೂಲಮಂತ್ರವಾಗಬೇಕು ನಮಗೆ.
ಕೇವಲ ದಿನವೊಂದಕ್ಕೆ ಸೀಮಿತವಾದ ಪಾಶ್ಚಾತ್ಯ ಆಚರಣೆಗಳಂತಲ್ಲ ಈ ದೇಶಪ್ರೇಮ. ಪ್ರತಿಯೊಬ್ಬರ ಉಸಿರಾಟದಲ್ಲಿ ಬೆರೆತ ರಾಷ್ಟ್ರ ಪ್ರೇಮ ನಮ್ಮದು. ರಾಷ್ಟ್ರಧರ್ಮದ ಬಾಳು ನಮ್ಮದಾಗಬೇಕು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಆಚರಣೆ ನಮ್ಮದಾದರೂ, ಭಾರತಮಾತೆಯ ಮಕ್ಕಳು ಎಂದಿಗೂ ನಾವೆಲ್ಲರೂ ಒಂದು.

ಭಾರತ ಮಾತೆಯ ಮಡಿಲಲ್ಲಿ ಆಡಿ ಬೆಳೆದಂತ ಹೆಮ್ಮೆಯ ಹೊತ್ತ ನಾವು ಧನ್ಯರು. ಯಾರದೋ ಮಾತಿಗೆ ಮರುಳಾಗಿ, ಅಶಾಂತಿ ಸೃಷ್ಟಿಸುವ ಮನಸ್ಸಿನ ಯೋಚನೆ, ಯೋಜನೆಗಳು ನಶಿಸಿಹೋಗಲಿ.
ನಮ್ಮ ನರನಾಡಿಗಳಲ್ಲಿ ಭಾರತ ದೇಶದ ಮಣ್ಣಿನ ಕಣಕಣದಲ್ಲಿನ ಸಾತ್ತ್ವಿಕ ಗುಣ ಮೈತೆತ್ತು ಬರಲಿ. ನೂರಾರು ಕೋಟಿ ಸಧೃಢ ಜನಾಂಗ ನಮ್ಮ ದೇಶದ ಆಸ್ತಿ. ದೇಶ ಕಾಯಬೇಕಾದ ಯುವಜನಾಂಗಕ್ಕೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ. ದೇಶದ ಆಸ್ತಿ ಕಾಯಬೇಕಾದ ಯುವಜನತೆಯ ಪಾಡು, ‘ಬೇಲಿಯೇ ಎದ್ದು ಹೊಲ ಮೇದಂತೆ’ ಆಗದಿರಲೆಂಬ ಆಶಯದೊಂದಿಗೆ 75 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು🙏
🇮🇳ಜೈ ಹಿಂದ್🇮🇳
ಮಹಮ್ಮದ್ ಅಸ್ಗರ್, ನ್ಯಾಯವಾದಿ, ಮುಡಿಪು,ಮಂಗಳೂರು