
ಬೆಂಗಳೂರು: ಕರ್ನಾಟಕ ಸರ್ಕಾರವು (Govt of Karnataka) ‘ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ’ (Har Ghar Tiranga) ಅಭಿಯಾನದ ಉತ್ತೇಜನಕ್ಕಾಗಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಜವಾಹರ್ಲಾಲ್ ನೆಹರು (Jawaharlal Nehru) ಅವರ ಭಾವಚಿತ್ರ ಕೈಬಿಟ್ಟಿರುವುದು ಪ್ರತಿಪಕ್ಷ ಕಾಂಗ್ರೆಸ್ನ (Indian National Congress) ಕೆಂಗಣ್ಣಿಗೆ ಗುರಿಯಾಗಿದೆ. ಸ್ವಾತಂತ್ರ್ಯ ಸೇನಾನಿಗಳ ಚಿತ್ರಪಟ ಮತ್ತು ವಿವರವಿದ್ದ ಜಾಹೀರಾತಿನಲ್ಲಿ ನೆಹರು ಫೋಟೊ ಹಾಕಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಆಕ್ಷೇಪವಾಗಿದೆ


.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇವರು ಮುಖ್ಯಮಂತ್ರಿಯಾಗಿರುವಾಗ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ನೆಹರೂ ಫೋಟೊ ಇಲ್ಲದಿರುವುದು ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿಯವರಿಗೆ ಆದ ಅವಮಾನ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಎಸ್.ಆರ್.ಬೊಮ್ಮಾಯಿ ಅವರ ರಾಜಕೀಯ ಗುರು ಎಂ.ಎನ್.ರಾಯ್ ಅವರೂ ಸಹ ನೆಹರೂ ಅವರ ಬೆಂಬಲಿಗರಾಗಿದ್ದರು. ಇಂಥ ನೆಹರೂ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಮರೆತಿರುವುದು ಕರುಣಾಜನಕ ಎಂದು ವಿಶ್ಲೇಷಿಸಿದ್ದಾರೆ.
‘ಇವರ ಮನಸ್ಥಿತಿ ಏನು ಎನ್ನುವುದು ಇದೀಗ ರಾಜ್ಯದ ಜನರಿಗೆ ಅರಿವಾಗುತ್ತಿದೆ. ಮುಂದೆ ಇವರು ಗಾಂಧಿ ಫೋಟೋ ತೆಗೆದು ತಮ್ಮ ಫೋಟೊ ಹಾಕಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಕಿತ್ತೊಗೆಯುತ್ತಾರೆ. ಇವರು ದೇಶಭಕ್ತರು ಎಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ತಾರೆ. ಒಬ್ಬರಾದರೂ ಹೋರಾಟಗಾರರು ಇದ್ದಾರಾ ಇವರ ಬಳಿ’ ಎಂದು ಅವರು ಪ್ರಶ್ನಿಸಿದರು.