

ಮಂಗಳೂರು: ವಿದ್ಯಾರ್ಥಿಗಳ ಕೈಯ್ಯಲ್ಲಿದ್ದ ರಕ್ಷಾ ಬಂಧನವನ್ನು ಶಿಕ್ಷಕರು ಕಿತ್ತೆಸೆದ ಆರೋಪ ಹಿನ್ನೆಲೆ ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರು ಹೊರವಲಯದ ಕಾಟಿಪಳ್ಳದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದಿದೆ.

ನಿನ್ನೆ ರಕ್ಷಾಬಂಧನ ಹಿನ್ನೆಲೆ ವಿದ್ಯಾರ್ಥಿಗಳು ಕೈಗೆ ರಾಖಿ ಕಟ್ಟಿಕೊಂಡು ಬಂದಿದ್ದರು. ಆದರೆ ಕೆಲ ಶಿಕ್ಷಕರು ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ತೆಗೆಸಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ ಇಂದು ಪೋಷಕರು ಶಾಲೆಗೆ ಆಗಮಿಸಿ ಶಾಲಾ ಮುಖ್ಯಶಿಕ್ಷಕ ಮತ್ತು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ಫ್ರೆಂಡ್ಶಿಪ್ ಬ್ಯಾಂಡ್ ಎಂದು ತೆಗೆಸಿರುವುದಾಗಿ ಶಿಕ್ಷಕರ ಸಮಜಾಯಿಷಿ ನೀಡಿದ್ದಾರೆ.

ಶಿಕ್ಷಕರೇ ಮತ್ತೆ ಮಕ್ಕಳ ಕೈಗೆ ರಾಖಿ ಕಟ್ಟಬೇಕು. ರಾಖಿಯನ್ನು ಕಿತ್ತೆಸೆದ ಶಿಕ್ಷಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ. ಈ ವೇಳೆ ನಮ್ಮ ಶಾಲೆಯಲ್ಲಿ ಯಾವುದೇ ಕಾರಣಕ್ಕೂ ರಕ್ಷಾ ಬಂಧನ ತೆಗೆಸಲ್ಲ ಎಂದು ಶಾಲಾ ಮುಖ್ಯಶಿಕ್ಷಕ ತಿಳಿಸಿದ್ದಾರೆ. ಇನ್ನು ಪೋಷಕರು ಹಾಗೂ ಶಿಕ್ಷಕರ ವಾಗ್ವಾದದ ಹಿನ್ನೆಲೆ ಸುರತ್ಕಲ್ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ

