ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಂಜೀತ್ ರಂಜನ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ವಿರೋಧಿಸಿ ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬಟ್ಟೆಗಳನ್ನು ಪೊಲೀಸರು ಹರಿದು ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಪ್ರತಿಭಟನೆಯ ಸಂಕೇತವಾಗಿ ಇತರ ಪಕ್ಷದ ನಾಯಕರಂತೆ ಕಪ್ಪು ಬಟ್ಟೆಯನ್ನು ಧರಿಸಿದ್ದ ಪ್ರಿಯಾಂಕಾ ಗಾಂಧಿ ಮೊದಲು ಬ್ಯಾರಿಕೇಡ್‌ಗಳ ಮೇಲೆ ಹತ್ತಿದರು. ಅಲ್ಲಿ ಅವರು ಸ್ವಲ್ಪ ಸಮಯದವರೆಗೆ ಧರಣಿ ನಡೆಸಿದರು. ನಂತರ ಪೊಲೀಸರು ಆಗಮಿಸಿ ಅವರನ್ನು ಬಂಧಿಸಲು ಮುಂದಾದರು. ಅದಕ್ಕೆ ಪ್ರಿಯಾಂಕಾ ಒಪ್ಪದಿದ್ದಾಗ ಅವರನ್ನು ಎಳೆದುಕೊಂಡು ಹೋಗಲಾಯಿತು. ಈ ವಿಡಿಯೋ ವೈರಲ್ ಆಗಿದೆ. ಪೊಲೀಸರ ವರ್ತನೆಗೆ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಗೂ ಮುನ್ನ ಮಾತನಾಡಿದ್ದ ರಾಹುಲ್ ಗಾಂಧಿ, 70 ವರ್ಷದ ಪ್ರಜಾಪ್ರಭುತ್ವ ವ್ಯವಸ್ಥೆ 8 ವರ್ಷದಲ್ಲಿ ನಾಶವಾಗಿದೆ. ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಚರ್ಚಿಸಲು ಅವಕಾಶ ನೀಡುತ್ತಿಲ್ಲ. ದೇಶದಲ್ಲಿ ಇಂದು 4 ಜನರಿಂದ ಸರ್ವಾಧಿಕಾರ ನಡೆಯುತ್ತಿದೆ. ಯಾರಾದರೂ ಆ ಸರ್ವಾಧಿಕಾರಿಗಳ ವಿರುದ್ಧ ತಿರುಗಿಬಿದ್ದರೆ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಸುಳ್ಳು ಕೇಸ್ ಹಾಕಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವದ ಸಾವಿಗೆ ನಾವು ಸಾಕ್ಷಿಯಾಗಿದ್ದೇವೆ. ಸರ್ವಾಧಿಕಾರದ ಕಲ್ಪನೆಯ ವಿರುದ್ಧ ನಿಂತಿರುವ ಎ್ಲಲರನ್ನೂ ಕೆಟ್ಟದಾಗಿ ಹಲ್ಲೆ ನಡೆಸಿ, ಥಳಿಸಿ, ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಭಾರತ ಸರ್ವಾಧಿಕಾರದಲ್ಲಿದೆ, ಪ್ರಜಾಪ್ರಭುತ್ವ ಸತ್ತಿದೆ. ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ, ನಮಗೆ ಮಾತನಾಡಲು ಅವಕಾಶವಿಲ್ಲ, ಪ್ರತಿಭಟನೆಗೆ ಅವಕಾಶವಿಲ್ಲ, ಲೋಕಸಭೆ ಮತ್ತು ರಾಜ್ಯಸಭೆಯಿಂದ ನಮ್ಮನ್ನು ಅಮಾನತುಗೊಳಿಸಲಾಗಿದೆ. ನಮ್ಮ ದೇಶವು ಸರ್ವಾಧಿಕಾರಿಗಳ ಹಿಡಿತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.