
ಮಂಗಳೂರು ಪ್ರವಾಸದಲ್ಲಿರುವ ಜೆಡಿ(ಎಸ್) ಧುರೀಣ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಕಳೆದ ವಾರ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು (Praveen Nettaru) ಅವರ ಮನೆಗೆ ಭೇಟಿ ನೀಡಿದ ಬಳಿಕ ಎರಡು ವಾರಗಳ ಹಿಂದೆ ಕೊಲೆಯಾದ ಮಸೂದ್ (Masood) ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತ ಮಸೂದ್ ಸಹೋದರರೊಬ್ಬರು ಕೊಲೆ ಹೇಗೆ ನಡೆಯಿತು ಅಂತ ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಸುಳ್ಯ ತಾಲ್ಲೂಕು ಕಳಂಜೆಯಲ್ಲಿರುವ ಮಸೂದ್ ನಿವಾಸಕ್ಕೂ ಎಚ್ಡಿಕೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳ ಬೇಜವಾಬ್ದಾರಿತನ ಇಲ್ಲಿ ಕಾಣುತ್ತಿದೆ. ಪ್ರವೀಣ್ ಮನೆಗೆ ಬಂದಿದ್ದವರು ಮಸೂದ್ ಮನೆಗೆ ಬರಲಿಲ್ಲ. ಮಸೂದ್ ಹತ್ಯೆ ಹಿನ್ನೆಲೆಯಲ್ಲೂ ವಿಚಿತ್ರ ಸನ್ನಿವೇಶ ಇದೆ. ಮಸೂದ್ ಸಾವಿಗೆ ಕಾರಣವನ್ನು ಗಮನಕ್ಕೆ ತಂದಿದ್ದಾರೆ. ಮಸೂದ್ಗೆ ಯಾವುದೇ ಸಂಘಟನೆ, ಪಕ್ಷಗಳ ಸಂಪರ್ಕವಿರಲಿಲ್ಲ. ಹಿಂದೂ ಸಂಘಟನೆ ಯವರೇ ಆತನ ಹತ್ಯೆಗೆ ಸ್ಕೆಚ್ ಹಾಕಿದ್ದರು. ಇದನ್ನು ಪೊಲೀಸರ ಗಮನಕ್ಕೆ ತಂದು, ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
