
ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಳಂಜ ಎಂಬಲ್ಲಿ ಎಂಟು ಮಂದಿಯ ತಂಡವೊಂದರಿಂದ ಕ್ಷುಲ್ಲಕ ವಿಚಾರಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಮಸೂದ್ ಎಂಬ ಯುವಕನ ಮನೆಗೆ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಭೇಟಿ ನೀಡಿದ್ದು, ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಸಮಾಜದಲ್ಲಿ ಈ ತರಹದ ಘಟನೆಗಳು ಇನ್ನು ಮುಂದಕ್ಕೆ ನಡೆಯಬಾರದು. ತನ್ನ ಯವ್ವನವನ್ನು ಸುಖವಾಗಿ ಕಟ್ಟಿಕೊಳ್ಳುವ ಯುವಕರನ್ನು ಮತೀಯವಾಗಿ ಹತ್ಯೆ ಮಾಡಲಾಗುತ್ತಿದೆ. ಇದರ ಹಿಂದಿರುವ ಮತೀಯ ಶಕ್ತಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡಬೇಕಾಗಿದೆ. ಜಿಲ್ಲಾಡಳಿತ, ಸರ್ಕಾರ ಹಾಗೂ ಗೃಹ ಸಚಿವರು ಇಂಥಹ ಅಮಾನವೀಯ ಕ್ರತ್ಯಗಳನ್ನು ಮಟ್ಟಹಾಕಲು ಕ್ರಮಕೈಗೊಳ್ಳಬೇಕಾಗಿದೆ” ಎಂದಿದ್ದಾರೆ. ಅಲ್ಲದೇ ಮೃತ ಕುಟುಂಬದ ಜೊತೆ ಸದಾ ಇರುವುದಾಗಿ ಭರವಸೆ ನೀಡಿದ ಅವರು, ಮಸೂದ್ ಕುಟುಂಬಕ್ಕೆ ಸುಮಾರು 25 ಲಕ್ಷ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸಚಿನ್ ರಾಜ್ ಶೆಟ್ಟಿ, ರಾಜ್ಯ ಎನ್ ಎಸ್ ಯು ಐ ಉಪಾಧ್ಯಕ್ಷರಾದ ಫಾರೂಕ್ ಬಾಯಬೆ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹನೀಫ್ ಪುಂಚತ್ತಾರ್, ಮಾಜಿ ನಗರಸಭಾ ಸದಸ್ಯರಾದ ಅನ್ವರ್ ಖಾಸಿಂ ಸಾಲ್ಮರ, ಕಬಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಾಮೋದರ್ ಮುರ, ಕಾಂಗ್ರೆಸ್ ಮುಖಂಡರಾದ ಗಂಗಾದರ ಶೆಟ್ಟಿ ಎಲಿಕ ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಶಾನ್ವಾಜ್ಹ್ ಬಪ್ಪಳಿಗೆ ಉಪಸ್ಥಿತರಿದ್ದರು.
