ಸುಮಾರು 28 ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಗುಜರಾತ್ ನ್ಯಾಯಾಲಯ ಎತ್ತಿಹಿಡಿದ ನಂತರ ದೂರುದಾರನು ಕೋಪಗೊಂಡಿದ್ದಾನೆ. ಇದೇ ಕೋಪದಲ್ಲಿ ಅವರು ನ್ಯಾಯಮೂರ್ತಿ ಮೇಲೆ ಶೂ ಬಿಸಾಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಒಳಗೆ ಶೂ ದಾಳಿ ನಡೆಸಿದ ಒಂದು ವಾರದ ನಂತರ ಅಹಮದಾಬಾದ್ನಲ್ಲಿ ಈ ಘಟನೆ ನಡೆದಿದೆ.
ಅಹಮದಾಬಾದ್, ಅಕ್ಟೋಬರ್ 15: ಮಂಗಳವಾರ ಗುಜರಾತ್ನ ನ್ಯಾಯಾಲಯದ ಆವರಣದಲ್ಲಿ ವಿಚಾರಣೆ ನಡೆಯುತ್ತಿರುವಾಗ ವ್ಯಕ್ತಿಯೊಬ್ಬ ಅಹಮದಾಬಾದ್ನ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶ ಪುರೋಹಿತ್ ಅವರ ಮೇಲೆ ತನ್ನ ಚಪ್ಪಲಿ ಎಸೆದ ಘಟನೆ ನಡೆದಿದೆ. ಕಳೆದ ವಾರ ಇದೇ ರೀತಿ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಕೂಡ ಶೂ ದಾಳಿ ನಡೆದಿತ್ತು.
ಇಂದು ಚಪ್ಪಲಿ ಎಸೆದ ವ್ಯಕ್ತಿ ತಾನು ದಾಖಲಿಸಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದಕ್ಕೆ ಕೋಪಗೊಂಡಿದ್ದರು. ಅದೇ ಕಾರಣಕ್ಕೆ ಅವರು ಜಡ್ಜ್ ಮೇಲೆ ಚಪ್ಪಲಿ ಎಸೆದಿದ್ದರು. “ಆತನನ್ನು ನ್ಯಾಯಾಲಯದ ಸಿಬ್ಬಂದಿ ಹಿಡಿದಿದ್ದರೂ ನ್ಯಾಯಾಧೀಶರು ಆತನನ್ನು ಬಿಟ್ಟುಬಿಟ್ಟರು. ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸಿಬ್ಬಂದಿಗೆ ಸೂಚಿಸಿದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಏನಿದು ಪ್ರಕರಣ?:
ಈ ಪ್ರಕರಣವು 1997ರದ್ದು. ಆಗ ಗುಜರಾತ್ನ ಗೋಮ್ಟಿಪುರದಲ್ಲಿ ಕೆಲವು ಯುವಕರು ಕ್ರಿಕೆಟ್ ಆಡುತ್ತಿದ್ದರು. ಆ ಸಮಯದಲ್ಲಿ ತರಕಾರಿ ಖರೀದಿಸಲು ಹೊರಗೆ ಹೋಗಿದ್ದ ಅರ್ಜಿದಾರರಿಗೆ ಚೆಂಡು ತಗುಲಿತು. ಬಳಿಕ ಮಾತಿನ ಚಕಮಕಿ ಆರಂಭವಾಯಿತು. ನಂತರ ಹೊಡೆದಾಟ ನಡೆಯಿತು. ಆಮೇಲೆ ಆ ವ್ಯಕ್ತಿ ಗೋಮ್ಟಿಪುರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಆಯುಧದಿಂದ ಹಲ್ಲೆ ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಈ ಪ್ರಕರಣವು 2009ರಲ್ಲಿ ಮೆಟ್ರೋ ನ್ಯಾಯಾಲಯಕ್ಕೆ ಹೋಯಿತು. ಈ ಪ್ರಕರಣದ ವಿಚಾರಣೆಯ ಕೊನೆಯಲ್ಲಿ ನ್ಯಾಯಾಲಯವು 2017ರ ಫೆಬ್ರವರಿಯಲ್ಲಿ ನಾಲ್ವರನ್ನು ಖುಲಾಸೆಗೊಳಿಸಿತು. ನಂತರ ಅರ್ಜಿದಾರರು 2017ರ ಮೇಯಲ್ಲಿ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.

ಮೇಲ್ಮನವಿಯನ್ನು ಆಲಿಸಿದ ನಂತರ, ಸೆಷನ್ಸ್ ನ್ಯಾಯಾಲಯವು ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ಅಕ್ಟೋಬರ್ 13, 2025ರಂದು ಮೇಲ್ಮನವಿಯನ್ನು ವಜಾಗೊಳಿಸಿತು. ಸೆಷನ್ಸ್ ನ್ಯಾಯಾಲಯದ ತೀರ್ಪಿನಿಂದ ಅಸಮಾಧಾನಗೊಂಡ ಅರ್ಜಿದಾರರು ಜೋರಾಗಿ ಮಾತನಾಡಲು ಪ್ರಾರಂಭಿಸಿದರು. ನಂತರ ನ್ಯಾಯಾಲಯದಲ್ಲಿ ಅನುಚಿತವಾಗಿ ವರ್ತಿಸಿದರು. ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಲಾಯಿತು. ಆದರೆ, ಆ ವ್ಯಕ್ತಿ ನ್ಯಾಯಾಧೀಶರ ಮೇಲೆ ತನ್ನ ಚಪ್ಪಲಿಗಳನ್ನು ಎಸೆದನು. ನ್ಯಾಯಾಧೀಶರು ಯಾವುದೇ ಗಾಯಗಳಿಲ್ಲದೆ ಪಾರಾದರು. ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ದೂರುದಾರರನ್ನು ಹಿಡಿದುಕೊಂಡರು.
ನಂತರ ಅವರನ್ನು ನ್ಯಾಯಾಲಯದ ಕೋಣೆಯಲ್ಲಿ ಕೂರಿಸಲಾಯಿತು. ನ್ಯಾಯಾಲಯವು ದೂರು ದಾಖಲಿಸಲಿಲ್ಲ. ಆದರೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಅವರು ಸ್ಥಳಕ್ಕೆ ಬಂದು ಆ ವ್ಯಕ್ತಿಯನ್ನು ವಶಕ್ಕೆ ಪಡೆದರು. ಅಹಮದಾಬಾದ್ನಲ್ಲಿ ನಡೆದ ಈ ಘಟನೆಯು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಒಳಗೆ ಶೂ ದಾಳಿ ನಡೆದ ಒಂದು ವಾರದ ನಂತರ ನಡೆದಿದೆ.