
ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದ ಬಳಿಕ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ (ಅ.13) ಹೇಳಿಕೊಂಡಿದ್ದರು. ಈ ಕುರಿತಂತೆ ಇಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬರು ಸಚಿವರಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸುವುದು ಇದೆ. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ “ಆರ್‌ಎಸ್‌ಎಸ್ ಬಗ್ಗೆ ಮಾತನಾಡಲು ನಿನಗೆಷ್ಟು ಧೈರ್ಯ?” ಎಂದು ಖರ್ಗೆ ಅವರಿಗೆ ಧಮ್ಕಿ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ನಿಮ್ಮ ಆರ್‌ಎಸ್‌ಎಸ್ ಶಾಖೆಗಳಲ್ಲಿ ಇದನ್ನೇ ಕಲಿಸಿಕೊಡುತ್ತಾರಾ?” ಎಂದು ಆತನಿಗೆ ಪ್ರಶ್ನಿಸಿದ್ದಾರೆ.
https://www.facebook.com/share/v/19vhh71XGh
https://www.facebook.com/plugins/video.php?%20height=476&href=https%3A%2F%2Fwww.facebook.com%2Freel%2F983478043962557%2F&show_text=false&width=270&t=0
ಈ ಕುರಿತು ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, “ಆರ್‌ಎಸ್‌ಎಸ್ ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ. ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ. ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ?” ಎಂದು ಪ್ರಶ್ನಿಸಿದ್ದಾರೆ.
“ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು ಬಿವೈ ವಿಜಯೇಂದ್ರ, ಆರ್.ಅಶೋಕ, ಸಿ.ಟಿ ರವಿ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ?” ಎಂದು ಕೇಳಿದ್ದಾರೆ.
“ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು, ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ” ಎಂದಿದ್ದಾರೆ.
“ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, ಆರ್‌ಎಸ್‌ಸ್ ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ. ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ” ಎಂದು ಸ್ಪಷ್ಟಪಡಿಸಿದ್ದಾರೆ.
“ಆರ್‌ಎಸ್‌ಎಸ್‌ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ, ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ” ಎಂದು ಹೇಳಿದ್ದಾರೆ.
“ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.