Published : Oct 09 2025, 09:05 PM IST

Mysuru Crime Accused Arrest
ದಸರಾ ಸಂಭ್ರಮದ ವೇಳೆ ಮೈಸೂರಿನ ಅರಮನೆ ಬಳಿ 9 ವರ್ಷದ ಅಲೆಮಾರಿ ಬಾಲಕಿ ರಾಧಿಕಾ ಮೇಲೆ ಅತ್ಯಾ*ಚಾರ ನಡೆಸಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಇಂತಹದೇ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಕಾರ್ತಿಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು (ಅ.09): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆ ಪ್ರಕರಣಗಳು ವರದಿಯಾಗಿದ್ದು, ಇದೀಗ 9 ವರ್ಷದ ಅಲೆಮಾರಿ ಬಾಲಕಿ ಅತ್ಯಾ*ಚಾರ ಮತ್ತು ಕೊಲೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದಸರಾ ಸಂಭ್ರಮದ ನಡುವೆಯೇ ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ಈ ನೀಚ ಕೃತ್ಯ ನಡೆದಿದೆ.
ಗುಲ್ಬರ್ಗಾದಿಂದ ಬಂದ ಕಂದಮ್ಮನಿಗೆ ಮೈಸೂರಿನಲ್ಲಿ ಕರಾಳ ಅಂತ್ಯ:
ಮೃತ ಬಾಲಕಿಯನ್ನು ಗುಲ್ಬರ್ಗಾ ಮೂಲದ ಅಲೆಮಾರಿ ಜನಾಂಗಕ್ಕೆ ಸೇರಿದ ರಾಧಿಕಾ (9) ಎಂದು ಗುರುತಿಸಲಾಗಿದೆ. ತಂದೆ ದೇಸಿ ಹಾಗೂ ತಾಯಿ ಅಂಬಿಕಾ ಅವರೊಂದಿಗೆ ರಾಧಿಕಾ ಕುಟುಂಬವು ದಸರಾ ಹಿನ್ನೆಲೆಯಲ್ಲಿ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿತ್ತು. ಕಳೆದ 20 ದಿನಗಳಿಂದ ಸುಮಾರು 70ಕ್ಕೂ ಹೆಚ್ಚು ಅಲೆಮಾರಿ ಜನರು ಮೈಸೂರಿಗೆ ಬಂದು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ಟೆಂಟ್‌ಗಳನ್ನು ಹಾಕಿಕೊಂಡು ಬಲೂನ್, ಪೀಪಿ, ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು
ಅಕ್ಟೋಬರ್ 7ರ ರಾತ್ರಿ ಸುಮಾರು 12 ಗಂಟೆಯವರೆಗೆ ವ್ಯಾಪಾರ ಮಾಡಿ ಮನೆಗೆ ಬಂದ ಇಡೀ ಕುಟುಂಬ ಊಟ ಮಾಡಿ ಮಲಗಿತ್ತು. ಆದರೆ, ಮಧ್ಯರಾತ್ರಿ 4 ಗಂಟೆ ಸುಮಾರಿಗೆ ಮಳೆ ಬಂದ ಕಾರಣ ಜೋಪಡಿ ಸರಿ ಮಾಡಲು ಎದ್ದಾಗ ಬಾಲಕಿ ರಾಧಿಕಾ ನಾಪತ್ತೆಯಾಗಿರುವುದು ಗೊತ್ತಾಗಿದೆ. ತಕ್ಷಣ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಟೆಂಟ್‌ಗೆ ಕೂಗಳತೆ ದೂರದಲ್ಲಿದ್ದ ಗುಂಡಿಯೊಂದರಲ್ಲಿ ರಾಧಿಕಾ ಅವರ ಶವ ಪತ್ತೆಯಾಗಿದೆ.
ಕಠಿಣ ಶಿಕ್ಷೆಗೆ ಸಾರ್ವಜನಿಕರ ಆಗ್ರಹ:
ಬಾಲಕಿಯ ಮೃತದೇಹ ಸಿಕ್ಕ ಪರಿಸ್ಥಿತಿ ಕಂಡು ಇಡೀ ಅಲೆಮಾರಿ ಕುಟುಂಬಗಳು ಬೆಚ್ಚಿಬಿದ್ದಿದ್ದವು. ಬಾಲಕಿಯ ಮೈ ಮೇಲೆ ಕೆಳ ಭಾಗದ ಬಟ್ಟೆಗಳಿರಲಿಲ್ಲ. ಅಲ್ಲದೆ, ಬಾಲಕಿಯ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಗುರುತುಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಇದು ಅತ್ಯಾ*ಚಾರ ಮಾಡಿ ಕೊಲೆ ಮಾಡಿದ ಕೃತ್ಯ ಎಂದು ಶಂಕಿಸಲಾಗಿದೆ. ಪೊಲೀಸರು ತಕ್ಷಣ ತನಿಖೆ ಕೈಗೊಂಡು ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರ ನಿವಾಸಿ, 31 ವರ್ಷದ ಕಾರ್ತಿಕ್ ಎಂಬಾತನೇ ಕೊಲೆ ಆರೋಪಿ ಎಂದು ಖಚಿತಪಡಿಸಿಕೊಂಡಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಮಧ್ಯವ್ಯಸನಿ ಆರೋಪಿ:
ಕೊಲೆ ಆರೋಪಿ ಕಾರ್ತಿಕ್ ಮಧ್ಯವ್ಯಸನಿಯಾಗಿದ್ದು, ಈ ಹಿಂದೆ ಮಂಡ್ಯದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾ*ರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದು, ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಆರೋಪಿ ಕಾರ್ತಿಕ್ ಮೈಸೂರಿನ ಖಾಸಗಿ ಬಸ್ ನಿಲ್ದಾಣದ ಮೂಲಕ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದನು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಳ್ಳೇಗಾಲದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿ ಮೈಸೂರಿಗೆ ಕರೆತರುತ್ತಿದ್ದಾರೆ.
ಒಂದೆಡೆ ಪುಟ್ಟ ಕಂದಮ್ಮನ ಮೇಲೆ ಇಂತಹ ಪೈಶಾಚಿಕ ಕೃತ್ಯ ಎಸಗಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿಬಂದರೆ, ಇನ್ನೊಂದೆಡೆ ಮೂರು ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಎರಡು ಕೊಲೆಗಳು ನಡೆದಿರುವುದು ಮೈಸೂರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.