ಉಡುಪಿ: ಎಕೆಎಂಎಸ್ ಬಸ್ಸುಗಳ ಮಾಲೀಕ ಮತ್ತು ಸ್ಥಳೀಯ ಉದ್ಯಮಿ ಸೈಫುದ್ದೀನ್ (50) ಅವರನ್ನು ದುಷ್ಕರ್ಮಿಗಳ ತಂಡವು ಇಂದು (ಶನಿವಾರ) ಬೆಳಗಿನ ಜಾವ ಭೀಕರವಾಗಿ ಹತ್ಯೆಗೈದಿದೆ.
ಜಿಲ್ಲೆಯ ಮಲ್ಪೆ ಠಾಣೆ ವ್ಯಾಪ್ತಿಯ ಕೊಡವೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಅವರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಯ ತೀವ್ರತೆಗೆ ಸೈಫುದ್ದೀನ್ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಕೃತ್ಯ ಎಸಗಿದ ಬಳಿಕ ಅಪರಾಧಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಹತ್ಯೆಯಾದ ಸೈಫುದ್ದೀನ್ ಅವರಿಗೆ ಸ್ಥಳೀಯವಾಗಿ ಒಳ್ಳೆಯ ಉದ್ಯಮದ ಹಿನ್ನೆಲೆ ಇದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿಟಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಹಳೆ ದ್ವೇಷ ಅಥವಾ ವ್ಯವಹಾರ ಸಂಬಂಧಿತ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.