ಮಂಗಳೂರು ಏರ್ಪೋರ್ಟ್ನಿಂದ ದುಬೈಗೆ ಬೆಳಗ್ಗೆ 8.50ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟ ರದ್ದಾಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿಮಾನಕ್ಕಾಗಿ ಕಾದು ಕಾದು ಪ್ರಯಾಣಿಕರು ಹೈರಾಣಾದ ಪ್ರಸಂಗ ನಡೆದಿದೆ. ಪ್ರಯಾಣಿಕರಿಗೆ ಸರಿಯಾದ ಸೌಲಭ್ಯ ನೀಡದೆ ಏರ್ ಇಂಡಿಯಾ ಸಿಬ್ಬಂದಿ ಸತಾಯಿಸ್ತಿರುವ ಆರೋಪವೂ ಕೇಳಿಬಂದಿದೆ.
ಮಂಗಳೂರು, ಸೆಪ್ಟೆಂಬರ್ 26: ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ (Air India) ವಿಮಾನದ ಹಾರಾಟ ತಾಂತ್ರಿಕ ದೋಷದ ಹಿನ್ನೆಲೆ ರದ್ದಾದ ಪರಿಣಾಮ ಪ್ರಯಾಣಿಕರು ಪರದಾಡಿದ್ದಾರೆ. ಮಂಗಳೂರು ಏರ್ಪೋರ್ಟ್ನಿಂದ ಬೆಳಗ್ಗೆ 8.50ಕ್ಕೆ ವಿಮಾನ ಹಾರಾಟ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ದೋಷದ ಕಾರಣ ನೀಡಿ ಪ್ರಯಾಣಿಕರನ್ನು ಸಿಬ್ಬಂದಿ ಕೂರಿಸಿದ್ದರು. ಅಂತಿಮವಾಗಿ ವಿಮಾನ ಹಾರಾಟವನ್ನ ರದ್ದು ಮಾಡಲಾಗಿದೆ.
ಆರಂಭದಲ್ಲಿ ಒಂದು ಗಂಟೆ ತಡವಾಗಿ ವಿಮಾನ ಹೊರಡಲಿದೆ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ತಿಳಿಸಿದ್ದರು. ಆ ಬಳಿಕ ಇನ್ನೂ ಸ್ವಲ್ಪ ತಡವಾಗಬಹುದೆಂದು ಹೇಳಿದ್ದಲ್ಲದೆ, ಮಧ್ಯಾಹ್ನ 3.30ಕ್ಕೆ ಫ್ಲೈಟ್ ಟೇಕಾಫ್ ಆಗಲಿದೆ ಎಂದು ಮಾಹಿತಿ ಕೊಟ್ಟಿದ್ದರು. ಆ ಸಮಯ ಕಳೆದರೂ ವಿಮಾನ ಹಾರಾಟದ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಪ್ರಯಾಣಿಕರು ಮತ್ತೆ ಈ ಬಗ್ಗೆ ವಿಚಾರಿದ್ದಾರೆ. ಆಗ ಮತ್ತೆ ಬೇರೆಯದ್ದೇ ಸಮಯ ಹೇಳಿರುವ ಏರ್ಪೋರ್ಟ್ ಸಿಬ್ಬಂದಿ ಸಂಜೆ 4.30ಕ್ಕೆ ಹೊರಡೋದಾಗಿ ತಿಳಿಸಿದ್ದಾರೆ. ಅಂತಿಮವಾಗಿ ಸಂಜೆ 6 ಗಂಟೆಗೆ ಸಮಯ ನೀಡಿ ವಿಮಾನ ಹಾರಾಟ ರದ್ದು ಮಾಡಲಾಗಿದೆ
ಪ್ರಯಾಣಿಕರ ಬೇಸರ
ವಿಮಾನ ಹಾರಾಟ ರದ್ದಾದ ಪರಿಣಾಮ ಹೆಚ್ಚುವರಿ ಹಣ ನೀಡಿ ಹಗಲಿನ ಪ್ರಯಾಣಕ್ಕೆ ಬುಕ್ ಮಾಡಿದ್ದ ಪ್ರಯಾಣಿಕರು ನಿರಾಸೆಗೊಂಡಿದ್ದಾರೆ. ರಾತ್ರಿ ವೇಳೆ ಪ್ರಯಾಣ ಬೇಡ ಎಂದು ಹೆಚ್ಚುವರಿ ಮೊತ್ತ ಭರಿಸಿದ್ದೇವೆ. ಈಗ ಬಹರೈನ್ನಿಂದ ಬರುವ ಫ್ಲೈಟ್ನಲ್ಲಿ ಕಳಿಸ್ತೇವೆ ಎಂದು ಇವರು ಸಬೂಬು ಹೇಳುತ್ತಿದ್ದು, ಹೆಚ್ಚು ಮೊತ್ತ ಭರಿಸಿಯೂ ಮತ್ತೆ ರಾತ್ರಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವಲತ್ತುಕೊಂಡಿದ್ದಾರೆ. ಅಲ್ಲದೆ ಪ್ರಯಾಣಿಕರಿಗೆ ಸರಿಯಾದ ಸೌಲಭ್ಯ ನೀಡದೆ ಏರ್ ಇಂಡಿಯಾ ಸಿಬ್ಬಂದಿ ಸತಾಯಿಸ್ತಿರುವ ಆರೋಪವೂ ಕೇಳಿಬಂದಿದೆ.
ಜೂನ್ 12 ರ ಮಧ್ಯಾಹ್ನ ಅಹಮದಾಬಾದ್ನಿಂದ ಲಂಡನ್ ಗ್ಯಾಟ್ವಿಕ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿತ್ತು. ಆ ಬಳಿಕ ತನ್ನ ಸೇವೆಯಲ್ಲಿ ಸಾಕಷ್ಟು ಸುರಕ್ಷಿತ ಕ್ರಮವನ್ನ ಏರ್ ಇಂಡಿಯಾ ಕೈಗೊಂಡಿದೆ. ಹೀಗಿದ್ದರೂ ಇತ್ತೀಚೆಗೆ ಮೇಲಿಂದ ಮೇಲೆ ಇಂತಹ ತಾಂತ್ರಿಕ ಸಮಸ್ಯೆಗಳು ವಿಮಾನದಲ್ಲಿ ಕಾಣಿಸಿಕೊಳ್ಳುತ್ತಿವೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ಸಮಸ್ಯೆಗಳು ಒಂದೆಡೆಯಾದ್ರೆ, ವಿಮಾನಗಳಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ತಿರೋ ತಾಂತ್ರಿಕ ಸಮಸ್ಯೆಗಳೂ ಪ್ರಯಾಣಿಕರ ಬೇಸರಕ್ಕೆ ಕಾರಣವಾಗ್ತಿವೆ.