
ನವದೆಹಲಿ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದೆಹಲಿ ಬಾಬಾ ಎಂದೇ ಖ್ಯಾತಿಯಾಗಿದ್ದ ಚೈತನ್ಯಾನಂದ ಸರಸ್ವತಿ ಸ್ವಾಮಿ(Swami Chaitanyananda Saraswati) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೆಹಲಿಯ ವಸಂತ್ ಕುಂಜ್ ಪೊಲೀಸ್ (Vasant Kunj Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾಮಿ ಪಾರ್ಥಸಾರಥಿ, ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್-ರಿಸರ್ಚ್ ಕಾಲೇಜು ನಡೆಸುತ್ತಿರುವ ಸ್ವಾಮೀಜಿ ಸ್ಕಾಲರ್‌ಶಿಪ್ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ವಿಚಾರಣೆಯ ವೇಳೆ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್‌ನಲ್ಲಿ ಇಡಬ್ಲ್ಯೂಎಸ್ ವಿದ್ಯಾರ್ಥಿವೇತನ ಪಡೆಯುತ್ತಿದ್ದ 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸ್ವಾಮೀ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮೆಸೇಜ್ ಮತ್ತು ಅನಗತ್ಯ ದೈಹಿಕ ಸಂಪರ್ಕ ಹೊಂದಿದ್ದರು ಎಂದು 17 ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿಯರ ದೂರಿನ ಅನ್ವಯ ವಸಂತ್ ಕುಂಜ್ ನಾರ್ತ್ ಪೊಲೀಸ್ ಠಾಣೆಯಲ್ಲಿ 75(2)/79/351(2) ಬಿಎನ್‌ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಸಿಸಿಟಿವಿ ಸೇರಿದಂತೆ ಇತರೆ ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್‌ನೊಂದಿಗೆ ರಾಜತಾಂತ್ರಿಕ ವಾಹನ ಬಳಸುತ್ತಿದ್ದ ವಿಚಾರವೂ ಬಯಲಾಗಿದ್ದು, ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.