
ಸಾರಾಂಶ
2023ರಲ್ಲಿ ತಿಮರೋಡಿ ಮನೆಯಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.. ಕೊನೆಯ 5 ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬೇರೆ, ಬೇರೆ ಸಾವಿನ ಘಟನೆಗಳ ಬಗ್ಗೆ ಚಿನ್ನಯ್ಯ ಮಾತನಾಡಿದ್ದಾನೆ.
ಮಂಗಳೂರು (ಸೆ.22): ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಚಿನ್ನಯ್ಯ ನಡುವಿನ ಸಂಭಾಷಣೆಯ ಒಂದೊಂದೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗುತ್ತಿದ್ದು, ವೈರಲ್ ಆಗುತ್ತಿವೆ. ಭಾನುವಾರ ಅವರಿಬ್ಬರ ನಡುವಿನ ಸಂಭಾಷಣೆಯ ಎಂಟನೇ ವಿಡಿಯೋ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದೆ.
2023ರಲ್ಲಿ ತಿಮರೋಡಿ ಮನೆಯಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಆದರೆ, ಅದನ್ನು ಯಾರೂ ಅಧಿಕೃತವಾಗಿ ಖಚಿತಪಡಿಸಿಲ್ಲ. ಕೊನೆಯ 5 ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಬೇರೆ, ಬೇರೆ ಸಾವಿನ ಘಟನೆಗಳ ಬಗ್ಗೆ ಚಿನ್ನಯ್ಯ ಮಾತನಾಡಿದ್ದಾನೆ. ಸೌಜನ್ಯ ಹತ್ಯೆಯ ನಂತರ ಏನೇನು ನಡೆಯಿತು, ಆರೋಪಿ ಸಂತೋಷ್ ರಾವ್ ಸೆರೆ ಸಿಕ್ಕಿದ್ದು ಹೇಗೆ ಎಂಬಿತ್ಯಾದಿ ಸಂಗತಿಗಳನ್ನು ತಿಮರೋಡಿ ಜೊತೆ ಚಿನ್ನಯ್ಯ ಹಂಚಿಕೊಂಡಿರುವುದು ವಿಡಿಯೋದಲ್ಲಿದೆ.
8ನೇ ವಿಡಿಯೋದಲ್ಲಿ, ‘ಸೌಜನ್ಯಳ ಅ*ಚಾರ, ಕೊಲೆ ಬಳಿಕ, ರವಿ ಪೂಜಾರಿ ಬಾಹುಬಲಿ ಬೆಟ್ಟಕ್ಕೆ ಹೋಗಿರಲಿಲ್ಲ. ಬಾಹುಬಲಿ ಬೆಟ್ಟದಲ್ಲಿ ಡ್ಯೂಟಿ ಮಾಡಿರಲಿಲ್ಲ. ಡ್ಯೂಟಿ ಮಾಡದಿದ್ದಕ್ಕೆ ಮ್ಯಾನೇಜರ್‌ಗಳು ಆತನಿಗೆ ಬೈದಿದ್ದರು. ಅಲ್ಲದೆ, ಘಟನೆ ಬಳಿಕ, ರವಿ ಪೂಜಾರಿ ಮ್ಯಾನೇಜರ್ ಜೊತೆ ಊಟಕ್ಕೂ ಹೋಗಿರಲಿಲ್ಲ. ಊಟದಲ್ಲಿ ವಿಷ ಹಾಕುತ್ತಾರೆ ಅನ್ನೋ ಅನುಮಾನ ಆತನಿಗೆ ಇತ್ತು. ಹಾಗಾಗಿ, ವಿಠಲ ಗೌಡರ ಹೋಟೆಲ್‌ಗೆ ಹೋಗಿ, ಬನ್ಸ್ ಮತ್ತು ಟೀ ಕುಡಿದು ಹೋಗಿದ್ದ. ಆ ದಿನವೇ ರಾತ್ರಿ 7.30ಕ್ಕೆ ಹಗ್ಗ ಬಿಗಿದು, ಆತನನ್ನು ಕೊಂದಿದ್ದಾರೆ’ ಎಂಬ ಸಂಗತಿಯನ್ನು ಹೇಳಿದ್ದಾನೆ.
ನಿನ್ನೆಯೂ ಗೈರು
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಎದುರಿಸುತ್ತಿರುವ ತಿಮರೋಡಿ, ಭಾನುವಾರವೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ತಿಮರೋಡಿ ಮನೆಗೆ ತೆರಳಿದ ಪೊಲೀಸರು, 2ನೇ ಬಾರಿ ನೋಟಿಸ್ ಅಂಟಿಸಿದ್ದಾರೆ. ಸೆ.25 ರಂದು ವಿಚಾರಣೆಗೆ ಬರಲು ಸೂಚಿಸಿದ್ದಾರೆ.