
ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಘಟನೆ ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ನಾಲ್ವರು ಶಂಕಿತ ಉಗ್ರರನ್ನು ಭದ್ರತಾ ಪಡೆ ವಶಕ್ಕೆ ಪಡೆದುಕೊಂಡಿದೆ.
ಶುಕ್ರವಾರ (ಸೆ.20) ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ದೋಡಾ-ಉಧಂಪುರ ಗಡಿಯ ಬಳಿ ಗುಂಡಿನ ಚಕಮಕಿ ನಡೆದಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಇದೇ ವೇಳೆ ಜೈಶ್-ಎ-ಮೊಹಮ್ಮದ್ ಸಂಘಟನೆಯವರು ಎನ್ನಲಾದ ನಾಲ್ವರು ಶಂಕಿತ ಉಗ್ರರು ಭದ್ರತಾ ಪಡೆಯ ಬಲೆಗೆ ಬಿದ್ದಿದ್ದಾರೆ.
ಈ ಕುರಿತು ಸೇನೆ ಮಾಹಿತಿ ನೀಡಿದ್ದು, ಭದ್ರತಾ ಪಡೆ ಹಾಗೂ ಪೊಲೀಸರು ನಿರ್ದಿಷ್ಟ ಮಾಹಿತಿಯ ಮೇರೆಗೆ ದೋಡಾ-ಉಧಂಪುರ ಗಡಿಯ ದುಡು ಬಸಂತ್ಗಢದ ಎತ್ತರ ಪ್ರದೇಶಕ್ಕೆ ತಲುಪಿದಾಗ ಗುಂಡಿನ ಚಕಮಕಿ ನಡೆದಿದೆ. ದಾಳಿ ವೇಳೆ ಯೋಧರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.