
– ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ
ಕೋಲಾರ: ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ (Manjunath Gowda) ಗೆದ್ದರೆ ರಾಜಕೀಯ ಬಿಡುತ್ತೇನೆ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ (KY Nanjegowda) ಸವಾಲು ಹಾಕಿದ್ದಾರೆ.
2023ರ ಮಾಲೂರು (Malur) ಕ್ಷೇತ್ರದ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ (High Court) ತೀರ್ಪು ನೀಡಿರುವ ಕುರಿತು ಕೋಲಾರದಲ್ಲಿ (Kolar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬಂದಿದೆ. ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ರೀ ಕೌಂಟಿಂಗ್ ಕೊಟ್ರೆ ನಾನು ಬದ್ಧ ಎಂದು ಹಲವು ಬಾರಿ ಹೇಳಿದ್ದೆ. ಶಾಸಕ ಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ನಾನು ಅಪೀಲು ಹಾಕಿದ್ದೇನೆ ಎಂದರು.
ಚುನಾವಣೆ ಪ್ರಕ್ರಿಯೆ ವಜಾ ಮಾಡಿದ ಮೇಲೆ ಚುನಾವಣೆ ಘೋಷಣೆ ಮಾಡಬೇಕಿತ್ತು. ರೀ ಕೌಂಟಿಂಗ್ ಮಾಡಿದ್ದರೆ ನಾನು ತಯಾರಿದ್ದೆ. ನಿಮ್ಮದೇ ಸರ್ಕಾರ, ನಿಮ್ಮದೇ ಮಂತ್ರಿ, ಅಧಿಕಾರಿಗಳು, ನೀವೆ ಕಾವಲಿದ್ದು ಮತ ಎಣಿಕೆ ಮಾಡಿದ್ದು. ವಿವಿ ಪ್ಯಾಟ್ ಕೌಂಟಿಂಗ್ ಮಾಡಿಸಿದ್ರು, ಅವರ ಪ್ರೊಸಿಜರ್ ಪ್ರಕಾರ ಮಾಡಿದ್ರು. ಇವರಿಗೆ ಹುಚ್ವು ಹಿಡಿದಿದೆ, ಜೀವಮಾನದಲ್ಲಿ ಅವರು ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ. ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಲೂರು ತಾಲೂಕು ತಬ್ಬಲಿಯಾಗಿಲ್ಲ, ಮೂವತ್ತು ದಿನ ಸಮಯಾವಕಾಶ ಕೊಟ್ಟಿದ್ದಾರೆ. ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ. ಮರು ಎಣಿಕೆ ಆಗಲಿ, ಅಸಿಂಧು ವಿರುದ್ಧ ಸುಪ್ರೀಂ ಮೊರೆ ಹೋಗುವೆ. ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ. ಅವರೇನು ಶಾಸಕರಾಗಿದ್ದಾರಾ? ಇಲ್ಲವಲ್ಲಾ, ಯಾರೋ ಕೆಲವರು ಸಂಭ್ರಮ ಮಾಡಿದ್ದಾರೆ. ಮಂಜುನಾಥ್ ಗೌಡ ಹಗಲು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.