ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ಎಸ್‌ಐಟಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಐದು ಕಡೆ ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ವಿಧಿವಿಜ್ಞಾನ ತಂಡವು ಮೂಳೆ ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದು, ಈ ವೈಜ್ಞಾನಿಕ ಸಾಕ್ಷ್ಯಗಳು ಬಂಗ್ಲೆಗುಡ್ಡೆ ರಹಸ್ಯವನ್ನು ಭೇದಿಸುವಲ್ಲಿ ನಿರ್ಣಾಯಕವಾಗಲಿವೆ.
ದಕ್ಷಿಣ ಕನ್ನಡ (ಸೆ.17): ಬಂಗ್ಲೆಗುಡ್ಡೆ ಮೀಸಲು ಅರಣ್ಯದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆಯು ಮಹತ್ವದ ತಿರುವು ಪಡೆದಿದ್ದು, ವಿಶೇಷ ತನಿಖಾ ದಳ (SIT) ದ ಮೂರು ಪ್ರತ್ಯೇಕ ತಂಡಗಳು ಐದು ವಿಭಿನ್ನ ಸ್ಥಳಗಳಲ್ಲಿ ಮಾನವ ಅಸ್ಥಿಪಂಜರಗಳ ಅವಶೇಷಗಳನ್ನು ಪತ್ತೆ ಹಚ್ಚಿವೆ. ಈ ಬೆಳವಣಿಗೆಯಿಂದಾಗಿ ‘ಬಂಗ್ಲೆಗುಡ್ಡೆ ರಹಸ್ಯ’ ಭೇದಿಸುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಶೋಧ ಕಾರ್ಯದ ವಿವರಗಳು:
ಎಸ್‌ಐಟಿ ತಂಡವು ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆಯನ್ನು ಹಗಲು-ರಾತ್ರಿ ನಡೆಸುತ್ತಿದೆ. ಅರಣ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ಸಂದರ್ಭದಲ್ಲಿ, ಭೂಮಿಯ ಮೇಲ್ಭಾಗದಲ್ಲಿ ಹರಡಿರುವ ಅಸ್ಥಿಪಂಜರಗಳ ಅವಶೇಷಗಳು ಮತ್ತು ಮಾನವ ದೇಹದ ಕೆಲವು ಭಾಗಗಳು ಪತ್ತೆಯಾಗಿವೆ. ಊಟದ ವಿರಾಮವನ್ನೂ ಪಡೆಯದೆ ನಿರಂತರವಾಗಿ ಮೂರು ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಮೂಳೆಗಳ ಅವಶೇಷಗಳು ದೊರೆತ ಎಲ್ಲಾ ಸ್ಥಳಗಳಲ್ಲೂ ಮಹಜರು ಪ್ರಕ್ರಿಯೆ ನಡೆಸಲಾಯಿತು.
ವೈಜ್ಞಾನಿಕ ಸಾಕ್ಷ್ಯ ಸಂಗ್ರಹ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ತಂಡ (SOCO) ಪತ್ತೆಯಾದ ಮೂಳೆಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿತು. ಶೋಧದ ಸಮಯದಲ್ಲಿ, ಮೂಳೆಗಳು ಪತ್ತೆಯಾದ ಪ್ರತಿ ಜಾಗದಿಂದ ಮಣ್ಣಿನ ಮಾದರಿಗಳನ್ನು ಪಿವಿಸಿ ಪೈಪ್‌ಗಳಲ್ಲಿ ಸಂಗ್ರಹಿಸಲಾಯಿತು. ಮಣ್ಣಿನ ಮಾದರಿಗಳು ಮತ್ತು ಮೂಳೆಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ವೈಜ್ಞಾನಿಕ ಪುರಾವೆಗಳು ಪ್ರಕರಣವನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡ ಕಾಡಿನಲ್ಲಿ ಬುಧವಾರ ಮತ್ತೆ ಶೋಧ ಕಾರ್ಯ ನಡೆಸುತ್ತಿದೆ.
ಈ ಪ್ರಗತಿಯೊಂದಿಗೆ, ನ್ಯಾಯಾಲಯದ ಒತ್ತಡ ಮತ್ತು ಸಾರ್ವಜನಿಕರ ಆತಂಕಕ್ಕೆ ಸೂಕ್ತ ಉತ್ತರ ದೊರೆತಂತಾಗಿದೆ. ಸಂಪೂರ್ಣ ವರದಿ ಬಂದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳು ಹೊರಬರಲಿವೆ.
ಈ ಮಾದರಿಗಳನ್ನು ಫಾರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅಲ್ಲಿ ಮಣ್ಣಿನ pH ಮಟ್ಟ, ರಾಸಾಯನಿಕ ಬದಲಾವಣೆಗಳು ಹಾಗೂ ಜೈವಿಕ ಅಂಶಗಳ ಹಾಜರಿ ಪರಿಶೀಲಿಸಲಾಗಲಿದೆ. ಶವ ಕೊಳೆತು ಮಣ್ಣಿನಲ್ಲಿ ಸೇರ್ಪಡೆ (decomposition) ಆಗಿದೆಯೇ ಎಂಬುದನ್ನು ಮಣ್ಣಿನಲ್ಲಿನ ರಾಸಾಯನಿಕ ಬದಲಾವಣೆಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ದೃಢಪಡಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.