ಬೆಂಗಳೂರು ಸೆ 16: ಬಿಜೆಪಿ ಸರಕಾರದ ಅವಧಿಯಲ್ಲಿ ನಲುವತ್ತು ಶೇಕಡಾ ಕಮೀಷನ್ ಪಡೆದ ಭ್ರಷ್ಟಾಚಾರಿಗಳ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಕಠಿಣ ಕ್ರಮ ಕೈಗೊಳ್ಳದೆ ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯತೆ ತೋರಿಸುತ್ತಿದೆ, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೊಂದಾಣಿಕೆ ರಾಜಕಾರಣದ ಭಾಗವಾಗಿದೆ . ಇವರ ಈ ಅನೈತಿಕ ಮತ್ತು ಅಸಂಬದ್ಧ ರಾಜಕೀಯ ಸಂಬಂಧವನ್ನು ಸೋಶಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸುತ್ತಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷ ತಿಳಿಸಿದ್ದಾರೆ
ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ಕೋವಿಡ್-19 ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಗಂಭೀರ ಅಕ್ರಮಗಳನ್ನು ಬಹಿರಂಗಪಡಿಸಿದ್ದು, 176 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಹಾಗೂ 128 ಕೋಟಿ ರೂಪಾಯಿಯನ್ನು ಗುತ್ತಿಗೆದಾರರು, ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ವಸೂಲು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೂ ಸಹ ತಪ್ಪಿತಸ್ಥರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದು ಸ್ಪಷ್ಟವಾಗಿ ರಾಜಕೀಯ ಹೊಂದಾಣಿಕೆಯನ್ನು ತೋರಿಸುತ್ತದೆ.
ಇದಕ್ಕೆ ಮೊದಲು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಯೋಗ ಸೇರಿದಂತೆ ಹಲವು ವರದಿಗಳು 40% ಕಮಿಷನ್ ವಿಚಾರ ಹಾಗೂ ದೊಡ್ಡ ಮಟ್ಟದ ಅಕ್ರಮಗಳನ್ನು ಬಹಿರಂಗಪಡಿಸಿದರೂ ಸಹ ಇದುವರೆಗೂ ಯಾರ ಮೇಲೂ ಕಠಿಣ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖಂಡನೀಯ.
ಸದರಿ ವರದಿಗಳ ಪ್ರಕಾರ, ಕೋವಿಡ್-19 ಸಮಯದಲ್ಲಿ ಜನರು ಆಮ್ಲಜನಕ, ಔಷಧಿ ಮತ್ತು ಹಾಸಿಗೆಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾಗಲೂ, ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳು PPE ಕಿಟ್‌ಗಳನ್ನು ಹೆಚ್ಚುವರಿ ದರದಲ್ಲಿ ಖರೀದಿಸಿ, ಕಪ್ಪುಪಟ್ಟಿಯ ಲ್ಯಾಬ್‌ಗಳಿಗೆ ಟೆಂಡರ್ ನೀಡುವ ಮೂಲಕ ಹಾಗೂ ಅನಧಿಕೃತವಾಗಿ ನಿಧಿ ದುರುಪಯೋಗ ಮಾಡಿರುವ ಮೂಲಕ ಮುಂತಾದ ರೀತಿಯಲ್ಲಿ ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೇವಲ ಭ್ರಷ್ಟಾಚಾರವಲ್ಲದೇ, ಜನರ ಜೀವದೊಂದಿಗೆ ನಡೆದ ದೊಡ್ಡ ದ್ರೋಹವಾಗಿತ್ತು.
ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ರಾಜಕಾರಣ ಅಲ್ಲದೇ ಇನ್ನೇನೋ ಅಲ್ಲ. ವರದಿಯಲ್ಲಿ ತಪ್ಪು ಕಂಡು ಬಂದರೂ ಸಹ ಕ್ರಮ ಕೈಗೊಳ್ಳದಿರುವುದು ಗಮನಿಸಿದರೆ ಭ್ರಷ್ಟ ಪಕ್ಷಗಳು ಪರಸ್ಪರದ ಭ್ರಷ್ಟ ನಾಯಕರನ್ನು ರಕ್ಷಿಸುವ ಭ್ರಷ್ಟ ರಾಜಕಾರಣದಲ್ಲಿ ಬದ್ಧತೆ ತೋರಿಸುತ್ತಿದ್ದಾರೆ ಎಂದು ಮುಜಾಹಿದ್ ರವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ,
SDPI ಆಗ್ರಹ:
- ವರದಿಗಳಲ್ಲಿ ಹೆಸರುಗಳಿರುವ ಎಲ್ಲ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
- ವಿಶೇಷವಾಗಿ ಕೋವಿಡ್ ಸಮಯದಲ್ಲಿ ನಡೆದ ಸಾವಿರಾರು ಕೋಟಿ ಲೂಟಿ ಮಾಡಿದ ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು.
- ರಾಜಕೀಯ ಹಸ್ತಕ್ಷೇಪವಿಲ್ಲದ ನಿಷ್ಪಕ್ಷಪಾತ ಸ್ವತಂತ್ರ ತನಿಖೆ ಹಾಗೂ ಶೀಘ್ರ ತೀರ್ಪಿಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು.
ಕರ್ನಾಟಕದ ಜನತೆಗೆ ಕೇವಲ ಘೋಷಣೆಗಳು, ವರದಿಗಳು ಹಾಗೂ ಸಮಿತಿಗಳ ವರದಿಗಳು ಬೇಡ. ನ್ಯಾಯ ವಿಳಂಬವಾಗುವುದು ಎಂದರೆ ನ್ಯಾಯ ನಿರಾಕರಣೆ ಎಂದಾಗಿದೆ ಆದುದರಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಿ ಎಂದು ಎಸ್‌ಡಿಪಿಐ ಪಕ್ಷ ರಾಜ್ಯದ ಜನತೆಯ ಪರವಾಗಿ ಆಗ್ರಹಿಸುತ್ತದೆ.