ಕತಾರ್ ರಾಜಧಾನಿ ದೋಹಾದಲ್ಲಿ ಹಮಾಸ್ ನಾಯಕತ್ವದ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಕ್ಕೆ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ದಾಳಿಯಲ್ಲಿ ಹಿರಿಯ ನಾಯಕ ಖಲೀಲ್ ಅಲ್-ಹಯ್ಯ ಅವರ ಮಗ ಸೇರಿದಂತೆ ತನ್ನ ಐವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ. ಕತಾರ್ ಭದ್ರತಾ ಪಡೆಗಳ ಒಬ್ಬ ಸದಸ್ಯ ಕೂಡ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕತಾರ್, ಇದು ಹೇಡಿತನದ ಕೃತ್ಯ ಅಮೆರಿಕದಿಂದ ದಾಳಿಯ ಬಗ್ಗೆ ಯಾವುದೇ ಪೂರ್ವ ಎಚ್ಚರಿಕೆ ಇರಲಿಲ್ಲ ಎಂದು ಹೇಳಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಮಂಗಳವಾರ ದೋಹಾದಲ್ಲಿ ಹಮಾಸ್ ನಾಯಕರ ವಿರುದ್ಧ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂದು ದೃಢಪಡಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಮಾತುಕತೆಯಲ್ಲಿ ಪ್ರಮುಖ ಮಧ್ಯವರ್ತಿಯಾಗಿರುವ ಮತ್ತು ಈ ಪ್ರದೇಶದ ಅತಿದೊಡ್ಡ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ನೆಲೆಯಾದ ಅಲ್ ಉದೈದ್ ವಾಯುನೆಲೆಯನ್ನು ಹೊಂದಿರುವ ಕತಾರ್ ಮೇಲೆ ಇಸ್ರೇಲ್ ನಡೆಸಿದ ಮೊದಲ ದಾಳಿ ಇದಾಗಿದೆ.
ಇಸ್ರೇಲ್ ಕೃತ್ಯ ಕತಾರ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ‘ಸ್ಪಷ್ಟ ಉಲ್ಲಂಘನೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಗಾಝಾ ಯುದ್ಧದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಪಕ್ಷಗಳು ಶಾಶ್ವತ ಕದನ ವಿರಾಮವನ್ನು ಸಾಧಿಸುವತ್ತ ಕೆಲಸ ಮಾಡಬೇಕು, ಬದಲಾಗಿ ಗಾಝಾದ ಭವಿಷ್ಯವನ್ನು ನಾಶ ಮಾಡಬಾರದು ಎಂದು ಗುಟೆರೆಸ್ ಹೇಳಿದ್ದಾರೆ.
“ದುರದೃಷ್ಟವಶಾತ್ ಕತಾರ್ ರಾಜಧಾನಿ ದೋಹಾದ ಒಂದು ಭಾಗದಲ್ಲಿ ನೆಲೆಗೊಂಡಿದ್ದ” ಹಮಾಸ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ಅಮೆರಿಕ ಮಿಲಿಟರಿಯಿಂದ ಟ್ರಂಪ್ ಆಡಳಿತಕ್ಕೆ ತಿಳಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಸಾರ್ವಭೌಮ ರಾಷ್ಟ್ರ, ಅಮೆರಿಕದ ಆಪ್ತ ಮಿತ್ರ ಹಾಗೂ ಶಾಂತಿ ಸ್ಥಾಪನೆಗಾಗಿ ನಮ್ಮೊಂದಿಗೆ ಕಠಿಣ ಪರಿಶ್ರಮಪಡುತ್ತಿರುವ, ಧೈರ್ಯದಿಂದ ಅಪಾಯಗಳನ್ನು ಎದುರಿಸುತ್ತಿರುವ ರಾಷ್ಟ್ರವಾದ ಕತಾರ್ ಒಳಗೆ ಏಕಪಕ್ಷೀಯವಾಗಿ ಬಾಂಬ್ ದಾಳಿ ನಡೆಸುವುದು ಅಮೆರಿಕ ಶಾಂತಿ ಸ್ಥಾಪನೆಯ ಗುರಿಯನ್ನು ಸಾಧಿಸಲು ಅಡ್ಡಿಯಾಗಲಿದೆ ಎಂದು ಕರೋಲಿನ್ ಲೀವಿಟ್ ಹೇಳಿದ್ದಾರೆ.
ಆದಾಗ್ಯೂ, ಗಾಝಾದ ಜನರ ದುಃಖದಿಂದ ಲಾಭ ಪಡೆದಿರುವ ಹಮಾಸ್ ಅನ್ನು ನಿರ್ಮೂಲನೆ ಮಾಡುವುದು ಯೋಗ್ಯ ಗುರಿಯಾಗಿದೆ ಎಂದಿದ್ದಾರೆ.
ಸೌದಿ ಅರೇಬಿಯಾ ಕೂಡ ಇಸ್ರೇಲ್ ದಾಳಿಯನ್ನು ‘ಕ್ರೂರ ಆಕ್ರಮಣ’ ಎಂದಿದ್ದು, ಮಿತ್ರ ರಾಷ್ಟ್ರವಾದ ಕತಾರ್‌ನ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ. ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಸೌದಿ ವಿದೇಶಾಂಗ ಸಚಿವಾಲಯ ‘ಕತಾರ್ ಜೊತೆ ಒಗ್ಗಟ್ಟು’ ಪ್ರದರ್ಶಿಸಿದೆ.
ಟರ್ಕಿ, ಕುವೈತ್, ಯುಎಇ, ಜೋರ್ಡಾನ್, ಇರಾನ್, ಇರಾಕ್, ಪ್ಯಾಲೆಸ್ತೀನ್, ಯೆಮನ್‌ನ ಹೌತಿ ಗುಂಪು, ಮಾಲ್ಡೀವ್ಸ್, ಪಾಕಿಸ್ತಾನ, ಲೆಬನಾನ್, ಯುನೈಟೆಡ್ ಕಿಂಗ್‌ಡಂ, ಫ್ರಾನ್ಸ್, ಹಮಾಸ್, ಲೆಬನಾನ್, ಮೊರಾಕ್ಕೋ, ಸಿರಿಯಾ, ಸುಡಾನ್, ಈಜಿಪ್ಟ್, ಗಲ್ಫ್ ಕೋ ಆಪರೇಷನ್ ಕೌನ್ಸಿಲ್, ಅಲ್‌ಜೀರಿಯಾ, ಕಝಾಕಿಸ್ತಾನ್, ಸ್ಪೇನ್, ಲಿಬಿಯಾ, ಮಾರ್ಷಿಯಸ್, ಒಮಾನ್, ಇಟಲಿ, ಜರ್ಮನಿ, ಯುರೋಪ್ ಒಕ್ಕೂಟ, ಭಾರತ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ರಾಷ್ಟ್ರಗಳು ಮತ್ತು ಗುಂಪುಗಳು ಇಸ್ರೇಲ್ ದಾಳಿಯನ್ನು ಖಂಡಿಸಿವೆ.