ಕೋಲಾರ: ಸ್ಥಳೀಯ ಚುನಾವಣೆಗಳ ಮೀಸಲು ಪಟ್ಟಿ , ಕ್ಷೇತ್ರ ವಿಂಗಡಣೆ ಎಲ್ಲವನ್ನೂ ಸರ್ಕಾರ ಮುಂದಿನ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಒಳಗೆ ನೀಡಿದರೆ ಸ್ಥಳೀಯ ಗ್ರಾಪಂ, ಜಿಪಂ, ತಾಪಂ, ನಗರಸಭೆ ಚುನಾವಣೆಗಳನ್ನು ನಡೆಸಲು ಚುನಾವಣೆ ಆಯೋಗ ಸಿದ್ಧವಿರುವುದಾಗಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು.
ಭಾನುವಾರ ಕೋಟಿಲಿಂಗೇಶ್ವರ ದೇವಾಲಯ ಹಾಗೂ ಕೆಜಿಎಫ್ ಚಿನ್ನದ ಗಣಿಗಳ ಪ್ರದೇಶದ ವೀಕ್ಷಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವಿಎಂ ಯಂತ್ರ ಮತ್ತು ಬ್ಯಾಲೆಟ್ ಪೇಪರ್ಗಳನ್ನು ಬಳಸಿಕೊಂಡು ಚುನಾವಣೆ ನಡೆಸಲು ಅವಕಾಶವಿದ್ದು, ಇವೆರಡರಲ್ಲಿ ಯಾವುದರ ಮೂಲಕ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ಪ್ರಸ್ತುತ ಚುನಾವಣೆ ನಡೆಸುವುದಕ್ಕೆ ಕೇವಲ ಎರಡು ಆಯ್ಕೆಗಳು ಮಾತ್ರ ಇರುವುದರಿಂದ, ಇವುಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಿದರೆ ಖರ್ಚು ಹೆಚ್ಚಾಗುತ್ತದೆ. ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ ಎನ್ನುವುದು ಮುಖ್ಯವಾಗುವುದಿಲ್ಲ. ಸರ್ಕಾರ ಯಾವ ವಿಧಾನದ ಮೂಲಕ ಚುನಾವಣೆ ನಡೆಸಲು ತೀರ್ಮಾನಿಸುತ್ತದೆಯೋ ಆ ವಿಧಾನವನ್ನು ಬಳಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗುತ್ತದೆ ಎಂದರು.
ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೂ ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆಯನ್ನು ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಅದು ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದಾಗಿದ್ದು, ತಮ್ಮ ವ್ಯಾಪ್ತಿಗೆ ಕೇವಲ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾತ್ರ ಬರುತ್ತದೆ ಎಂದರು.
ಕ್ಷೇತ್ರ ಪುನರ್ ವಿಂಗಡಣಾ ಕಾರ್ಯ ಇನ್ನು ಸ್ವಲ್ಪ ಬಾಕಿಯಿದೆ. ಮೀಸಲು ಪಟ್ಟಿಯನ್ನು ತಯಾರಿಸಬೇಕಾಗಿರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರವನ್ನೂ ಸಹ ಚುನಾವಣಾ ಆಯೋಗದಿಂದ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸರ್ಕಾರ ಮೂರು ತಿಂಗಳ ಕಾಲಾವಧಿಯನ್ನು ತೆಗೆದುಕೊಂಡಿದೆ. ಕೆಲವು ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿವೆ. ನಗರಸಭೆ, ಪುರಸಭೆಗಳ ವ್ಯಾಪ್ತಿಗೆ ಒಂದಷ್ಟು ಹಳ್ಳಿಗಳು ಕೂಡಿಕೊಂಡಿದ್ದರಿಂದ ಮತ್ತೆ ಕ್ಷೇತ್ರ ಪುನರ್ ವಿಂಗಡಣಾ ಕಾರ್ಯವನ್ನು ಮಾಡಬೇಕಾಗಿದೆ. ರಾಜ್ಯದ ಸುಮಾರು 11 – 12 ಜಿಲ್ಲೆಗಳಲ್ಲಿ ಈ ಪ್ರಯೋಗವಾಗಬೇಕಾಗಿದೆ ಎಂದರು.
ಜಿಪಂ ಕ್ಷೇತ್ರಗಳು ಮತ್ತು ತಾಪಂ ಕ್ಷೇತ್ರಗಳು ಹೆಚ್ಚಾಗಿರುವುದರಿಂದ ಈಗಾಗಲೇ 2023 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿರುವುದರಿಂದ ಈ ಎಲ್ಲ ಕ್ಷೇತ್ರಗಳಿಗೆ ಮೀಸಲು ಪಟ್ಟಿಯನ್ನು ಸರ್ಕಾರದ ವತಿಯಿಂದ ನೀಡಬೇಕಾಗಿದೆ. ಹೊಸದಾಗಿ ಸೃಷ್ಟಿಯಾಗಿರುವ ಜಿಪಂ ಮತ್ತು ತಾಪಂ ಕ್ಷೇತ್ರಗಳಲ್ಲಿ ಹಳೆಯ ಮೀಸಲನ್ನು ಇಟ್ಟುಕೊಂಡು ಚುನಾವಣೆ ನಡೆಸಲಾಗುವುದಿಲ್ಲ. ಉಳಿದಂತೆ 192 ನಗರಸಭೆ ಮತ್ತು ಪುರಸಭೆಗಳಿಗೆ ಹೊಸ ಮೀಸಲು ಪಟ್ಟಿ ನೀಡದೇ ಇದ್ದಲ್ಲಿ ಹಳೆಯ ಮೀಸಲಿನಂತೆಯೇ ಚುನಾವಣೆ ನಡೆಸಲಾಗುತ್ತದೆ ಎಂದರು.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸುವಂತೆ ಚುನಾವಣಾ ಆಯೋಗದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡವನ್ನು ಹಾಕಲಾಗುತ್ತಿದೆ. ಬೆಂಗಳೂರಿಗೆ ಮಾತ್ರ ಈಗ ಚುನಾವಣೆ ನಡೆಸಲಾಗುತ್ತಿದೆ. ನವೆಂಬರ್ ಒಂದನೇ ತಾರೀಖಿಗೆ ಅವರು ಕ್ಷೇತ್ರ ಪುನರ್ ವಿಂಗಡಣೆ ವರದಿಯನ್ನು ಸಲ್ಲಿಸಬೇಕು. ನವೆಂಬರ್ 30ಕ್ಕೆ ಮೀಸಲು ಪಟ್ಟಿಯನ್ನು ನೀಡಬೇಕು. ಆ ಬಳಿಕ ನಮಗೆ ಮೂರ್ನಾಲ್ಕು ತಿಂಗಳ ಕಾಲಾವಧಿ ಬೇಕೆಂದು ತಿಳಿಸಿದ್ದೇವೆ. ಸುಪ್ರೀಂ ಕೋರ್ಟ್ ಇದಕ್ಕೆ ಅನುಮತಿ ನೀಡಿದೆ. ಮುಂದಿನ ವರ್ಷದ ಜನವರಿ ಮತ್ತು ಫೆಬ್ರವರಿ ಒಳಗೆ ಇದೆಲ್ಲ ಕಾರ್ಯವನ್ನು ಮುಗಿಸಬೇಕಿದ್ದು, ಅಷ್ಟರೊಳಗೆ ನಾವು ನಮ್ಮ ಕೆಲಸವನ್ನು ಮುಗಿಸಬೇಕಿದೆ ಎಂದರು.