Asia Cup 2025: ಏಷ್ಯಾಕಪ್ 2025 ವೇಳಾಪಟ್ಟಿ ಬಿಡುಗಡೆಯಾಗಿದೆ. ಬಿಸಿಸಿಐ ಆಯೋಜಿಸುತ್ತಿರುವ ಈ ಬಾರಿಯ ಏಷ್ಯಾಕಪ್ಗೆ ಯುಎಇ ಆತಿಥ್ಯವಹಿಸಲಿದೆ. ಅದರಂತೆ ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಟೂರ್ನಿಗೆ ಚಾಲನೆ ಸಿಗಲಿದ್ದು, ಸೆಪ್ಟೆಂಬರ್ 28 ರಂದು ಫೈನಲ್ ಪಂದ್ಯ ನಡೆಯಲಿದೆ. ಇದರ ನಡುವೆ, ಅಂದರೆ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.
ಭಾರತ ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯಬಾರದೆಂದು ಎಐಎಂಐಎಂ ಮುಖ್ಯಸ್ಥ ಮತ್ತು ಹಿರಿಯ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯಾ ಟುಡೇ ಜೊತೆಗಿನ ವಿಶೇಷ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ಓವೈಸಿ, ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುವುದಿಲ್ಲ ಎಂಬುದನ್ನು ಸಹ ಒತ್ತಿ ಹೇಳಿದ್ದಾರೆ.
ಟೀಮ್ ಇಂಡಿಯಾ ದುಬೈನಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಡಲಿರುವುದು ನಿಜಕ್ಕೂ ನನಗೆ ಆಶ್ಚರ್ಯ ಮತ್ತು ಆಘಾತ ತಂದಿದೆ. ನಾನು ಆ ಪಂದ್ಯವನ್ನು ನೋಡುವುದಿಲ್ಲ. ಏಕೆಂದರೆ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಪ್ರಧಾನಿಯೇ ಹಲವು ಬಾರಿ ಹೇಳಿರುವಾಗ ನೀವು ಹೇಗೆ ಕ್ರಿಕೆಟ್ ಆಡುತ್ತೀರಿ? ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಎಂಬುದು “ಗೀಳು” ನಿಜ. ಆದರೆ ನಾವು ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು. ಉಗ್ರರು ಹಲವು ಜನರನ್ನು ಅವರ ಕುಟುಂಬಗಳ ಮುಂದೆಯೇ ಗುಂಡು ಹಾರಿಸಿ ಕೊಂದಿದ್ದರು. ಅದು ತನಗೆ ತುಂಬಾ ನೋವುಂಟು ಮಾಡಿದೆ.
ಈ ಘಟನೆ ಭಯಾನಕವಾಗಿತ್ತು. ಒಬ್ಬ ವ್ಯಕ್ತಿಯನ್ನು ಅವರ ಹೆಂಡತಿ ಮತ್ತು ಮಕ್ಕಳ ಮುಂದೆಯೇ ಗುಂಡು ಹಾರಿಸುವುದು ನೋವಿನ ಸಂಗತಿ. ಇಂತಹ ದಾಳಿ ನಡೆದ ಬಳಿಕ ಕೂಡ ನಾವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ಆಡುವುದರಲ್ಲಿ ಅರ್ಥವಿಲ್ಲ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ನನಗೆ ಈಗಲೂ ಅರ್ಥವಾಗದಿರುವುದು ಭಾರತ ಏಕೆ ಪಾಕಿಸ್ತಾನ್ ಜೊತೆ ಕ್ರಿಕೆಟ್ ಆಡುತ್ತಿದೆ ಎಂಬುದು. ಇದನ್ನು ನಿಷೇಧಿಸುವ ಅಧಿಕಾರ ಸರ್ಕಾರದ ಕೈಯಲ್ಲಿದೆ. ಇದಾಗ್ಯೂ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಆದರೆ ಈ ಪಂದ್ಯವನ್ನು ನಾನಂತು ನೋಡುವುದಿಲ್ಲ. ಭಾರತ ಮತ್ತು ಪಾಕಿಸ್ತಾನ್ ನಡುವೆ ಕ್ರಿಕೆಟ್ ಪಂದ್ಯ ನಡೆಯಬಾರದು ಎಂಬುದೇ ನನ್ನ ಅಭಿಪ್ರಾಯ.
ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸಬೇಕೆಂದು ನಾನಂತು ಆಗ್ರಹಿಸುತ್ತೇನೆ. ಇದೇ ಕಾರಣದಿಂದಾಗಿ ಮುಂಬರುವ ಏಷ್ಯಾಕಪ್ನಲ್ಲಿ ಇಂಡೊ-ಪಾಕ್ ಪಂದ್ಯವನ್ನು ವೀಕ್ಷಿಸುವುದಿಲ್ಲ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.