ನವದೆಹಲಿ: ವರುಣನ (Rain) ಅಬ್ಬರಕ್ಕೆ ಕಾಂಪೌಂಡ್ ಗೋಡೆ ಕುಸಿದು (Wall Collapse) ಮೂವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಬಾಲಕಿಯರು ಸೇರಿ ಏಳು ಜನ ಸಾವನ್ನಪ್ಪಿದ ದಾರುಣ ಘಟನೆ ದೆಹಲಿಯ (Delhi) ಜೈತ್‌ಪುರದ ಹರಿನಗರದಲ್ಲಿ ನಡೆದಿದೆ.
ನಗರದ ಹಳೆಯ ದೇವಾಲಯ ಒಂದರ ಬಳಿಯ ಕೊಳಗೇರಿ ಪ್ರದೇಶದಲ್ಲಿ ಹಲವಾರು ಗುಜರಿ ವ್ಯಾಪಾರಿಗಳು ವಾಸಿಸುತ್ತಿದ್ದರು. ಈ ಪ್ರದೇಶದಲ್ಲಿದ್ದ ಗೋಡೆ ಭಾರೀ ಮಳೆಯ ಹೊಡೆತಕ್ಕೆ ಹಠಾತ್ ಕುಸಿದಿದೆ. ಅವಶೇಷಗಳ ಅಡಿ 8 ಮಂದಿ ಸಿಲುಕಿದ್ದರು. ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಗಂಭಿರವಾಗಿ ಗಾಯಗೊಂಡಿದ್ದ 7 ಮಂದಿ ಸಾವನ್ನಪ್ಪಿದರು. ಮತ್ತೆ ಅಂತಹ ಘಟನೆಗಳು ಸಂಭವಿಸದಂತೆ ಈ ಜಾಗದಿಂದ ಜನರನ್ನು ಸ್ಥಳಾಂತರಿಸಿದ್ದೇವೆ ಎಂದು ಡಿಸಿಪಿ ಐಶ್ವರ್ಯ ಶರ್ಮಾ ತಿಳಿಸಿದ್ದಾರೆ.
ಶುಕ್ರವಾರ ತಡರಾತ್ರಿಯಿಂದ ದೆಹಲಿಯಲ್ಲಿ ತೀವ್ರ ಮಳೆಯಾಗುತ್ತಿದೆ. ಇಂದು (ಶನಿವಾರ) ಸಹ ಹೆಚ್ಚಿನ ಭಾಗಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೇ ಈ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇರುವುದರಿಂದ ತಗ್ಗು ಪ್ರದೇಶಗಳು ಮತ್ತು ಅಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಶನಿವಾರ ಬೆಳಿಗ್ಗೆಯವರೆಗೂ ಮುಂದುವರೆದಿತ್ತು. ಪರಿಣಾಮ ನಗರದ ಪಂಚಕುಯಿಯಾನ್ ಮಾರ್ಗ, ಮಥುರಾ ರಸ್ತೆ, ಶಾಸ್ತ್ರಿ ಭವನ, ಆರ್‌ಕೆ ಪುರಂ, ಮೋತಿ ಬಾಗ್ ಮತ್ತು ಕಿದ್ವಾಯಿ ನಗರ ಸೇರಿದಂತೆ ಹಲವಾರು ಪ್ರದೇಶಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಗಿತ್ತು.