ಧರ್ಮಸ್ಥಳದಲ್ಲಿ ನಡೆದ ಗಲಾಟೆಯ ಬಳಿಕ ಬಿಗ್ ಬಾಸ್ ಸ್ಪರ್ಧಿ ರಜತ್ ಮತ್ತು ಅವರ ಪತ್ನಿ ಅಕ್ಷತಾ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಬೆದರಿಕೆ ಸಂದೇಶಗಳ ಆಧಾರದ ಮೇಲೆ ರಜತ್ ದಂಪತಿ ದೂರು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಧರ್ಮಸ್ಥಳ ಗಲಾಟೆ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್ ಮತ್ತು ಅವರ ಪತ್ನಿ ಅಕ್ಷತಾ ಡಿಜಿಐಜಿಪಿ ಕಚೇರಿಗೆ ಆಗಮಿಸಿ, ತಮಗೆ ಬಂದಿರುವ ಜೀವ ಬೆದರಿಕೆ ಸಂದೇಶಗಳು ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ರಜತ್ ಅವರ ಪತ್ನಿ ಅಕ್ಷತಾಗೆ ಸಾಮಾಜಿಕ ಜಾಲತಾಣದಲ್ಲಿ ‘ಕೊಲೆ ಮಾಡುವೆ, ಕತ್ತರಿಸುವೆ’ ಎಂಬ ಬೆದರಿಕೆ ಸಂದೇಶಗಳು ಬಂದಿವೆ ಎಂದು ಆರೋಪಿಸಿ ಈ ದೂರು ದಾಖಲಾಗಿದೆ. ಸದ್ಯ ಈ ದೂರು ಸೈಬರ್ ಠಾಣೆಗೆ ವರ್ಗಾವಣೆಯಾಗಿದೆ.
ಧರ್ಮಸ್ಥಳಕ್ಕೆ ಸೌಜನ್ಯಗೆ ನ್ಯಾಯ ಕೇಳಲು ಹೋಗಿದ್ದೆವು: ರಜತ್
ದೂರು ನೀಡಿದ ಬಳಿಕ ಈ ಬಗ್ಗೆ ಮಾತನಾಡಿರುವ ರಜತ್,ನಾವು ಧರ್ಮಸ್ಥಳಕ್ಕೆ ಸೌಜನ್ಯಗೆ ನ್ಯಾಯ ಕೇಳಲು ಹೋಗಿದ್ದೆವು. ಯಾವುದೇ ಜಾತಿ, ಧರ್ಮ, ದೇವಸ್ಥಾನದ ಬಗ್ಗೆ ನಾವು ಮಾತನಾಡಿಲ್ಲ. ಹಾಡಹಗಲೇ ನಮ್ಮ ಕಣ್ಣ ಮುಂದೆ ಗಲಾಟೆ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಮತ್ತು ಬೆದರಿಕೆ ಸಂದೇಶ ಕಳುಹಿಸಿದವರ ವಿರುದ್ಧ ದೂರು ಕೊಟ್ಟಿದ್ದೇವೆ. ನಾವು ಬೆದರಿಕೆಗಳಿಗೆ ಹೆದರುವವರಲ್ಲ ಎಂದರು.
ರಜತ್ ಪತ್ನಿ ಅಕ್ಷತಾ ಹೇಳಿದ್ದೇನು?
ಅಕ್ಷತಾ ತಮ್ಮ ಸಾಮಾಜಿಕ ಜಾಲತಾಣದ ಸ್ಟೇಟಸ್‌ನಲ್ಲಿ, ‘ನಿನ್ನ ಗಂಡನನ್ನು ವಾಪಸ್ ಕರೆಸಿಕೊ, ಇದು ಮಂಡ್ಯ ಅಲ್ಲ, ಕರಾವಳಿ’ ಎಂಬ ಸಂದೇಶ ಕಳಿಸಿದ್ದಾರೆ. ಇದು ಜೀವ ಬೆದರಿಕೆಯಾಗಿದ್ದು, ದೂರು ನೀಡಿದ್ದೇವೆ. ನಾವು ಮಂಡ್ಯದವರು, ಹುಟ್ಟಿ ಬೆಳೆದಿದ್ದು ಮಂಡ್ಯದಲ್ಲಿ. ವಾಪಸ್ ಕರೆಯುವ ಅವಶ್ಯಕತೆ ಇಲ್ಲ ಎಂದರು.
ಘಟನೆ ಹಿನ್ನೆಲೆ ಏನು?
ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳಿಗೆ ಹಲ್ಲೆ ಗಲಾಟೆ ಸಂದರ್ಭದಲ್ಲಿ. ರಜತ್ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಗಲಾಟೆ ನಿಯಂತ್ರಿಸಲು ಲಘು ಲಾಠಿಚಾರ್ಜ್ ನಡೆಸಿ ಪರಿಸ್ಟಿತಿ ತಿಳಿಗೊಳಿಸಿದ್ದರು. ಈ ಘಟನೆ ಸಂಬಂಧ ಶಾರದಾ ಭಟ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ, ‘ಬಿಗ್ ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ. ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ, ಒಂದು ಗಂಡು ಮತ್ತು ಒಂದು ಹೆಣ್ಣು.ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕೊಳ್ಳಿ ಅಕ್ಷತಾ ಅವರೇ…ಇದು ಮಂಡ್ಯ ಅಲ್ಲ ಕರಾವಳಿ…… ಎಂದು ಪೋಸ್ಟ್ ಮಾಡಿದ್ದರು.
ಆದರೆ, ಶಾರದಾ ಭಟ್ ಸ್ಪಷ್ಟನೆ ನೀಡಿದ್ದು, ಗಲಾಟೆಯಲ್ಲಿ ಭಾಗಿಯಾಗುವುದು ಸರಿಯಲ್ಲ, ಮನೆಗೆ ಕರೆಸಿಕೊಳ್ಳಿ ಎಂದಿದ್ದೇನೆ, ಇದರಲ್ಲಿ ತಪ್ಪೇನಿದೆ? ಎಂದಿದ್ದಾರೆ. ಸದ್ಯ ಪ್ರಕರಣ ಸಂಬಂಧ ದೂರು ದಾಖಲಾಗಿದೆ.