ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ಸಮಾಜ ಸೇವಕ ಜಯನ್ ಟಿ ಆರೋಪಿಸಿದ್ದಾರೆ. ಈ ಆರೋಪದ ಮೇರೆಗೆ ಎಸ್ಐಟಿ ಸೂಚನೆ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅಪ್ರಾಪ್ತ ಬಾಲಕಿಯ ಶವ ಹೂತು ಹಾಕಲಾಗಿದೆ ಎಂಬ ಭಾರೀ ಆರೋಪವನ್ನು ಸಮಾಜ ಸೇವಕ ಜಯನ್ ಟಿ ಅವರು ಮಾಡಿದ್ದು, ಈ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಗೆ ದೂರು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಒಂದೊಂದೇ ಪ್ರಕರಣಗಳು ಮುನ್ನಲೆಗೆ ಬರುತ್ತಿರುವುದು ಹೆಚ್ಚಿನ ಸಂಚಲನಕ್ಕೆ ಕಾರಣವಾಗುತ್ತಿವೆ. ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಬಂದ ಜಯನ್ ಅವರಿಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಸ್ಐಟಿ ಸೂಚನೆ ನೀಡಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿರುವುದರಿಂದ ಅಲ್ಲೇ ಮೊದಲು ಕೇಸ್ ಕೊಡುವಂತೆ ಸೂಚನೆ ನೀಡಿದ ಹಿನ್ನೆಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 15 ವರ್ಷ ಹಿಂದೆ ಇದ್ದ ಠಾಣಾಧಿಕಾರಿಯ ಮೇಲೆ ಜಯನ್ ಆರೋಪ ಮಾಡಿದ್ದು, ಸುಮಾರು 15 ವರ್ಷದ ಬಾಲಕಿಯ ಶವ ನೋಡಿದ್ದೆ. ನಾನು ಕಣ್ಣಾರೆ ಕಂಡಿದ್ದೇನೆ ನನ್ನ ಜೊತೆ ಸಾಕ್ಷಿಗಳು ಇದ್ದಾರೆ. ತನಿಖೆಯ ವೇಳೆ ನಾನು ಅವರನ್ನು ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ.
ಜಯನ್ ಟಿ ಸಲ್ಲಿಸಿದ ದೂರು ಅರ್ಜಿಯಲ್ಲಿ, ಇಡೀ ಘಟನೆಯ ವಿವರಗಳನ್ನು ನೀಡಲಾಗಿದೆ. 2002-03 ರ ಅವಧಿಯಲ್ಲಿ ರಾಜ್ಯ ಹೆದ್ದಾರಿ ಸಂಖ್ಯೆ 37ರ ಬಳಿ ಇರುವ ಅರಣ್ಯ ಪ್ರದೇಶದಲ್ಲಿ 13ರಿಂದ 15 ವರ್ಷ ಪ್ರಾಯದ ಹೆಣ್ಣುಮಗುವಿನ ಶವವನ್ನು ಹೂತು ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದರ ಹಿಂದೆ ನಿಲುಕಿರುವವರು ಒಬ್ಬ ಪೊಲೀಸ್ ಅಧಿಕಾರಿ ಎಂದು ಆರೋಪಿಸಿದ್ದಾರೆ.
ದೂರು ಪ್ರಕಾರ, ಒಂದು ವಾರದ ನಂತರ ಆ ಪೊಲೀಸರು ಸ್ಥಳಕ್ಕೆ ಬಂದು, ಅದು ಸುಮಾರು 35 ರಿಂದ 40 ವರ್ಷ ಪ್ರಾಯದ ಹೆಂಗಸು ಎಂಬಂತೆ ಸ್ಥಳೀಯರಿಗೆ ತಿಳಿಸಿದ್ದರು. ಶವವು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯದ್ದೆಂದು ಹೇಳಿ, ಜಿಗುಪ್ಸೆಯಿಂದ ಸಾವು ಕಂಡಿದ್ದಾಳೆ ಎಂಬ ರೂಪದಲ್ಲಿ ಘಟನೆಗೆ ಮುಚ್ಚಳಿಟ್ಟಿದ್ದಾರೆ. ಶವವನ್ನು ಕೇವಲ ಒಂದು ಅಥವಾ ಎರಡು ಫೀಟ್ ಆಳದ ಹೊಂಡದಲ್ಲಿ ಹೂತು ಹಾಕಲಾಗಿದೆ.
ಜಯನ್ ಟಿ ಅವರ ಗಂಭೀರ ಆರೋಪಗಳು ಹೀಗಿವೆ:
- ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾದ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
- ಘಟನೆ ಸಂಬಂಧ ಯಾವುದೇ ಎಫ್‌ಐಆರ್ ಅಥವಾ ಪ್ರಕರಣ ದಾಖಲಾಗಿಲ್ಲ.
- ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮಹಜರು ನಡೆಸಿಲ್ಲ.
- ಮರಣೋತ್ತರ ಪರೀಕ್ಷೆ ಕೂಡ ಮಾಡಿಲ್ಲ.
- ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ.
ಜಯನ್ ಪ್ರತಿಕ್ರಿಯೆ:
ಧರ್ಮಸ್ಥಳದಲ್ಲಿ ಅಪ್ರಾಪ್ತ ಬಾಲಕಿಯ ಶವ ಹೂತು ಹಾಕಿದ ಪ್ರಕರಣ. ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ಸ್ವೀಕರಿಸಿ ಹಿಂಬರಹ ನೀಡಿ ಕಳುಹಿಸಿದ ಪೊಲೀಸರು. ಈ ಬಗ್ಗೆ ದೂರುದಾರ ಜಯಂತ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ, ಈ ಘಟನೆಗೆ ನಾನೇ ಪ್ರತ್ಯಕ್ಷ ಸಾಕ್ಷಿ. ನನ್ನ ಜೊತೆ ನಾಲ್ಕೈದು ಮಂದಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆ. ಗೌಪ್ಯತೆ ಕಾಪಾಡೋದಕ್ಕೆ ದೂರು ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈಗಲೂ ಆ ವ್ಯಕ್ತಿ ಬದುಕಿದ್ದಾರೆ. ಈ ದೂರಿನ ಬಗ್ಗೆ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಸಂಪೂರ್ಣವಾಗಿ ತನಿಖೆ ಮಾಡಬೇಕು. ಎಫ್ಐಆರ್ ದಾಖಲು ಮಾಡದಿದ್ದರೆ ಎಸ್ಐಟಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದಿದ್ದಾರೆ.
ಎಸ್ಐಟಿ ಪ್ರತಿಕ್ರಿಯೆ:
ಈ ದೂರು ಪರಿಶೀಲಿಸಿದ ಎಸ್ಐಟಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಡಿಜಿಪಿ ಮತ್ತು ಐಜಿಪಿ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಇದು ಧರ್ಮಸ್ಥಳ ಶವ ಹೂತು ಪ್ರಕರಣದಲ್ಲಿ ಹೊಸ ಬೆಳವಣಿಗೆಗೆ ದಾರಿ ತೆರೆದಿದ್ದು, ಮಕ್ಕಳ ಮೇಲಿನ ಅಪರಾಧಗಳ ಕುರಿತಂತೆ ಗಂಭೀರ ಕಾಳಜಿಗೆ ಕಾರಣವಾಗಿದೆ. ಈಗ ಎಲ್ಲಾ ಕಣ್ಣುಗಳು ಪೊಲೀಸ್ ಇಲಾಖೆ ಮತ್ತು ಎಸ್ಐಟಿಯ ಮುಂದಿನ ಕ್ರಮಗಳತ್ತ ನೆಟ್ಟಿರುತ್ತವೆ