ದಕ್ಷಿಣ ಕನ್ನಡ ಜಿಲ್ಲೆಯ ಮೂಡಿಗೆರೆ-ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಅನುಮತಿಯಿಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ ೧೦೩ ಮಂದಿ ಪ್ರವಾಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿಗಳು ಈ ಗುಂಪಿನಲ್ಲಿದ್ದರು.
ಬೆಳ್ತಂಗಡಿ: ಅನುಮತಿ ಇಲ್ಲದೆ ಟ್ರಕ್ಕಿಂಗ್ ಮಾಡುತ್ತಿದ್ದ 103 ಮಂದಿ ಪ್ರವಾಸಿಗರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಿಗೆರೆ-ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಶನಿವಾರ ನಡೆದಿದೆ. ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿಯ ಉದ್ಯೋಗಿಗಗಳು ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುತ್ತಿರುವ ಮಾಹಿತಿ ತಿಳಿದ ಬಣಕಲ್ ಮತ್ತು ಬಾಳೂರು ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಎಲ್ಲರನ್ನು ಬಂಧಿಸಿ 2 ಪ್ರವಾಸಿ ಬಸ್‌ಗಳು ಮತ್ತು 2 ಪಿಕಪ್ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ನಿಷೇಧಿತ ಪ್ರದೇಶಕ್ಕೆ ಟ್ರಕ್ಕಿಂಗ್ ಕರೆದುಕೊಂಡು ಹೋಗಿದ್ದು ಸ್ಥಳೀಯ ವ್ಯಕ್ತಿ ಎಂದು ತಿಳಿದು ಬಂದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಆಳವಾದ ಕಾಡುಗಳಲ್ಲಿ ನಡೆದುಹೋಗುವುದು ಅರಣ್ಯ ಕಾಯ್ದೆಗಳಿಗೆ ವಿರುದ್ಧವಾಗಿದೆ. ಇಲಾಖೆಯ ಪೂರ್ವಾನುಮತಿ ಇಲ್ಲದೆ ನಿಷೇಧಿತ ಪ್ರದೇಶದಲ್ಲಿ ಪ್ರವೇಶಿಸುವುದು ಅರಣ್ಯ ಕಾಯ್ದೆಯ ಉಲ್ಲಂಘನೆ ಆಗಿದೆ. ಬಣಕಲ್ ಪಿಎಸ್‌ಐ ರೇಣುಕಾ ಹಾಗೂ ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ನಿಷೇಧಿತ ಪ್ರದೇಶವನ್ನು ಪ್ರವೇಶಿಸುವುದು ಅರಣ್ಯ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. .