Ashraf Kammaje
Published : Jul 28 2025, 08:10 PM IST
ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವ ಹೂತಿರುವ ಬಗ್ಗೆ ಆರೋಪ ಮಾಡಿರುವ ಅನಾಮಿಕ ವ್ಯಕ್ತಿ ಎಸ್ಐಟಿ ತಂಡಕ್ಕೆ 13 ಶವಗಳ ಸ್ಥಳಗಳನ್ನು ತೋರಿಸಿದ್ದಾರೆ. ಈ ಸ್ಥಳಗಳನ್ನು ಗುರುತಿಸಿ ಮಹಜರು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ಖನನ ಕಾರ್ಯ ನಡೆಯಲಿದೆ.
ದಕ್ಷಿಣ ಕನ್ನಡ (ಜು.28): ಧರ್ಮಸ್ಥಳದಲ್ಲಿ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವ ಹೂತು ಹಾಕಿದ್ದೇನೆ. ಅವುಗಳನ್ನು ತೋರಿಸುತ್ತೇನೆ ಎಂದು ಮುಂದೆ ಬಂದಿರುವ ಅನಾಮಿಕನನ್ನು ಇಂದು ಶವ ಹೂಳಿರುವ ಸ್ಥಳಗಳನ್ನು ಪತ್ತೆ ಮಾಡುವುದಕ್ಕೆ ಕರೆದುಕೊಂಡು ಹೋಗಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ಒಂದು ದಿನದಲ್ಲಿ 13 ಶವಗಳನ್ನೂ ಹೂಳಿದ ಸ್ಥಳಗಳನ್ನು ಪತ್ತೆ ಮಾಡಿ ತೋರಿಸಿದ್ದಾನೆ.
ನೇತ್ರಾವತಿ ನದಿಯ ತಟದ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದ ಸಂಚಲನಕಾರಿಯಾದ ಪ್ರಕರಣವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಎಸ್ಐಟಿ (ವಿಶೇಷ ತನಿಖಾ ತಂಡ) ಇಂದು 15 ಶಂಕಿತ ಸ್ಥಳಗಳನ್ನು ಗುರುತಿಸುವ ಯೋಜನೆ ಮಾಡಿಕೊಂಡಿದ್ದರೂ, ಒಂದು ದಿನದಲ್ಲಿ 13 ಸ್ಥಳಗಳನ್ನಷ್ಟೇ ಗುರುತಿಸಲು ಸಾಧ್ಯವಾಗಿದೆ. ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ದೌರ್ಜನ್ಯವಾಗಿದೆ ಹಾಗೂ ಶವ ಹೂತು ಹಾಕಿದ್ದೇನೆ ಎಂದು ಹೇಳಿರುವ ಅನಾಮಿಕ ವ್ಯಕ್ತಿ ಇಂದು ತಾನು ಹೇಳಿದಂತೆಯೇ ಎಸ್ಐಟಿ ತಂಡದೊಂದಿಗೆ ಶವ ಪತ್ತೆ ಕಾರ್ಯಕ್ಕೆ ಸಹಕಾರ ನಡಿದ್ದಾನೆ.
ಈವರೆಗೆ 13 ಶವ ಹೂತಿರುವ ಸಾಧ್ಯತೆ ಇರುವ ಜಾಗಗಳನ್ನು ತೋರಿಸಿದ್ದಾನೆ. ಈ ಜಾಗಗಳನ್ನು ಗುರುತಿಸಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಧ್ಯಾಹ್ನದ ವೇಳೆಗೆ 8 ಸ್ಥಳಗಳನ್ನು ಪರಿಶೀಲಿಸಲಾಯಿತು. ನಂತರ ಅನಾಮಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಊಟ ಮುಗಿಸಿದ ಬಳಿಕ ಇನ್ನೂ 5 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈವರೆಗೆ ಗುರುತಿಸಲಾದ ಸ್ಥಳಗಳಲ್ಲಿ ಜಮೀನಿನ ಮೇಲ್ಮೈ ಬದಲಾವಣೆ, ಮಣ್ಣಿನ ಬಣ್ಣ ವ್ಯತ್ಯಾಸ, ಹಾಗೂ ಜೀವಜಾಲದ ಚಟುವಟಿಕೆಗಳ ಸ್ಥಿತಿ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಪರಿಶೀಲನೆ ನಡೆದಿದೆ. Forensic team, Osteologist, Anthropologist, Photography & MLC Special Team ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ
ನಾಳೆಯೂ ಶವ ಹೂತಿರುವ ಸ್ಥಳಗಳ ಗುರುತು ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಮಿಕ ವ್ಯಕ್ತಿ ನೀಡಿರುವ ಮಾಹಿತಿ ಆಧರಿಸಿ, ನಾಳೆ ಬೆಳಗ್ಗೆ ಮತ್ತೆ ಸ್ಥಳ ಗುರುತಿಸುವ ಕಾರ್ಯ ಮುಂದುವರಿಯಲಿದೆ. ಈ ಪ್ರಕ್ರಿಯೆ ಬಳಿಕ ಎಸ್ಐಟಿ ಉತ್ಖನನ ಕಾರ್ಯಾಚರಣೆಗೆ ಚಾಲನೆ ನೀಡಲಿದೆ. 15 ಸ್ಥಳಗಳನ್ನು ಗುರುತಿಸಿದ ಬಳಿಕ ಅಸ್ಥಿ ಪಂಜರ ಅಥವಾ ಶವದ ಅಂಶಗಳ ಪತ್ತೆಗಾಗಿ ಮಣ್ಣನ್ನು ಎತ್ತುವ ಉತ್ಖನನ ಪ್ರಕ್ರಿಯೆ ಕೈಗೊಳ್ಳಲಾಗುವುದು.
ಈ ತನಿಖೆಯು ಕೇವಲ ಕರ್ನಾಟಕವಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದು, ಧರ್ಮಸ್ಥಳದ ಪರಿಸರದಲ್ಲಿ ನಿಖರ ಮಾಹಿತಿ ನೀಡುತ್ತಿರುವ ಅನಾಮಿಕ ವ್ಯಕ್ತಿಯ ಸಹಕಾರದೊಂದಿಗೆ ಪ್ರಕರಣದ ತನಿಖೆ ಸಾಗುತ್ತಿದೆ. ಇನ್ನು ಗುರುತು ಮಾಡಿದ ಸ್ಥಳವನ್ನು ಅಗೆದು ನೋಡಿದಾಗ, ಅಲ್ಲಿ ಶವಗಳು ಸಿಕ್ಕಿದರೆ ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಲಿದೆ. ಅನಾಮಿಕ ಗುರುತು ಮಾಡಿದ ಜಾಗ ಸರಿಯಾಗಿವೆಯೇ ಎಂಬುದನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುತ್ತಿದೆ.
ಮಧ್ಯಾಹ್ನದವರೆಗೆ 8 ಶವ ಹೂತ ಸ್ಥಳ ಗುರುತು:
ನೇತ್ರಾವತಿ ನದಿ ತೀರದ ಕಾಡಿನಲ್ಲಿ ಮಧ್ಯಾಹ್ನದ ವೇಳೆಗೆ 8 ಸ್ಥಳಗಳನ್ನು ಅನಾಮಿಕ ವ್ಯಕ್ತಿ ತೋರಿಸಿದ್ದನು. ಆದರೆ, ಶವ ಹೂತ ಸ್ಥಳ ಗುರುತು ವೇಳೆ ಒಂದೊಂದು ಸ್ಥಳ ಪತ್ತೆಗೂ ಸುಮಾರು 20 ರಿಂದ 40 ನಿಮಿಷ ಸಮಯ ತೆಗೆದುಕೊಂಡಿದ್ದಾನಂತೆ. ನಂತರ, ಉಳಿದ ತಂಡವು ಆ ಸ್ಥಳವನ್ನು ಗುರುತಿಸಿ, ಸುರಕ್ಷಿತವಾಗಿ ಅಗಿಯಲು ಅನುಕೂಲ ಆಗುವಂತೆ ಮಾರ್ಕಿಂಗ್ ಮಾಡಿದ್ದಾರೆ. ಮಧ್ಯಾಹ್ನದ ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ಊಟ ಮಾಡಿದ್ದಾನೆ. ಊಟದ ಬಳಿಕವೂ ಬೇರೆ ಕಡೆಗಳಲ್ಲಿ ಸ್ಥಳ ಮಹಜರು ಕಾರ್ಯ ಪುನಾರಂಭಿಸಿದ್ದಾರೆ. ಒಂದು ದಿನದಲ್ಲಿ 15 ಶವಗಳನ್ನು ಹೂಳಿರುವ ಜಾಗ ಪತ್ತೆ ಮಾಡಲು ಇನ್ನೂ ಪ್ರಕ್ರಿಯೆ ಚುರುಕುಗೊಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಂಜೆ ತನಕ ಒಂದು ದಿನದಲ್ಲಿ 13 ಸ್ಥಳಗಳನ್ನು ಮಾತ್ರ ಗುರುತು ಮಾಡುವುದಕ್ಕೆ ಸಾಧ್ಯವಾಯಿತು.