ಬೆಂಗಳೂರು: ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಹಾಗೂ ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಸರಣಿ ಕೊಲೆಗಳ ವರದಿ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳ ಆದೇಶವನ್ನು ಪಾಲಿಸುವುದರ ಜೊತೆಗೆ, ಸತ್ಯ ಸುದ್ದಿಯ ಪ್ರಸಾರವನ್ನು ಮುಂದುವರಿಸಲು ಡಿಜಿಟಲ್ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಒಮ್ಮತದ ನಿರ್ಣಯ ತೆಗೆದುಕೊಂಡಿವೆ. ನ್ಯಾಯಾಂಗದ ಪ್ರಕ್ರಿಯೆಯನ್ನು ಗೌರವಿಸುತ್ತಲೇ, ಪತ್ರಿಕಾ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗೆ ಬದ್ಧವಾಗಿರುವುದಾಗಿ ಅವರು ಘೋಷಿಸಿದ್ದಾರೆ.
ಧರ್ಮಸ್ಥಳದ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್, ತಮ್ಮ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆಕ್ಷೇಪಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ದಾವೆಯಲ್ಲಿ, 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿದಂತೆ ಒಟ್ಟು 8,842 ಲಿಂಕ್‌ಗಳನ್ನು ನಿರ್ಬಂಧಿಸುವಂತೆ ಅವರು ಕೋರಿದ್ದರು. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ನೇರ ಆರೋಪಗಳು ಇಲ್ಲದಿದ್ದರೂ, ತಮ್ಮ ಕುಟುಂಬ, ದೇವಾಲಯ ಮತ್ತು ಸಂಸ್ಥೆಗಳ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂಬುದು ಅವರ ಮುಖ್ಯ ವಾದವಾಗಿತ್ತು.
ಈ ವಾದವನ್ನು ಆಲಿಸಿದ್ದ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ವಿಜಯ ಕುಮಾರ್ ರೈ ಅವರು, ಜುಲೈ 18ರಂದು ಏಕಪಕ್ಷೀಯ ಪ್ರತಿಬಂಧಕ ಆದೇಶವನ್ನು ಹೊರಡಿಸಿದ್ದರು. ಈ ಆದೇಶದ ಅನ್ವಯ, ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಅಥವಾ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ, ಬೆಂಗಳೂರಿನ ಈದಿನ ಡಾಟ್ ಕಾಮ್ ಕಚೇರಿಯಲ್ಲಿ ಶುಕ್ರವಾರ ಪ್ರಮುಖ ಯೂಟ್ಯೂಬರ್‌ಗಳು ಮತ್ತು ಡಿಜಿಟಲ್ ಮಾಧ್ಯಮಗಳ ಪ್ರತಿನಿಧಿಗಳ ಮಹತ್ವದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ, ನ್ಯಾಯಾಲಯದ ಆದೇಶವನ್ನು ಪಾಲಿಸುವ, ಸತ್ಯ ಸುದ್ದಿಯ ಪ್ರಸಾರವನ್ನು ಮುಂದುವರಿಸುವ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟವನ್ನು ಒಗ್ಗಟ್ಟಿನಿಂದ ಮುಂದುವರಿಸುವ ಬಗ್ಗೆ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಜೊತೆಗೆ, “ಸದರಿ ಆದೇಶಗಳನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುವ ನಮ್ಮ ಹಕ್ಕನ್ನು ಉಳಿಸಿಕೊಳ್ಳುತ್ತಾ, ಈ ಸದ್ಯಕ್ಕೆ ಕೆಳಹಂತದ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ನಾವು ಪಾಲಿಸಲು ಬದ್ಧರಿದ್ದೇವೆ” ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದರು. “ಆದರೆ, ಆದೇಶದಲ್ಲೇ ಸೂಚಿಸಿರುವ ಹಾಗೆ ಮತ್ತು ನಮ್ಮ ಪತ್ರಿಕಾಧರ್ಮಕ್ಕೆ ಬದ್ಧರಾಗಿದ್ದುಕೊಂಡು ಯಾರದ್ದೇ ಮೇಲೆ ಆಧಾರರಹಿತವಾದ, ಮಾನನಷ್ಟಕ್ಕೆ ಕಾರಣವಾಗುವ ಸುದ್ದಿ ಅಥವಾ ವಿಶ್ಲೇಷಣೆಗಳನ್ನು ನಾವು ಪ್ರಕಟಿಸುವುದಿಲ್ಲ. ಅದೇ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ಯಥಾವತ್ ಸುದ್ದಿಗಳನ್ನು ಪ್ರಕಟಿಸುವ ನಮ್ಮ ಹಕ್ಕನ್ನು ನ್ಯಾಯಾಲಯವು ನಿರ್ಬಂಧಿಸಿಲ್ಲ ಎನ್ನುವುದನ್ನು ನಾವು ಅರಿತಿದ್ದೇವೆ. ಹೀಗಾಗಿ, ಸುದ್ದಿಗಳನ್ನು ಪ್ರಕಟಿಸುವ ಮತ್ತು ಈ ಹೊತ್ತು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತುವ ನಮ್ಮ ಹಕ್ಕನ್ನು ಚಲಾಯಿಸುತ್ತೇವೆ ಮತ್ತು ಆ ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ” ಎಂಬ ನಿರ್ಣಯವನ್ನು ಡಿಜಿಟಲ್ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರು ತೆಗೆದುಕೊಂಡರು.
ಸಭೆಯಲ್ಲಿ ದ ನ್ಯೂಸ್ ಮಿನಿಟ್‌ನ ಧನ್ಯಾ ರಾಜೇಂದ್ರನ್, ಪೂಜಾ ಪ್ರಸನ್ನ, ಈ ದಿನ ಟಿವಿಯ ಡಾ. ಬಸವರಾಜು ಬಿ.ಸಿ, ಈದಿನ.ಕಾಮ್ ಸಂಪಾದಕರಾದ ಬಸವರಾಜು ಮೇಗಲಕೇರಿ, ವಾರ್ತಾಭಾರತಿಯ ಆಝಾದ್ ಕಂಡಿಗ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್, ಪ್ರತಿಧ್ವನಿಯ ಶಿವಕುಮಾರ್, ನ್ಯಾಷನಲ್ ಟಿವಿಯ ಮಂಜು ಬಣಗೆರೆ, ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ, ಯೂಟ್ಯೂಬರ್‌ಗಳಾದ ಕಲಾ ಮಾಧ್ಯಮ ಪರಮೇಶ್ವರ್, ರಾ ಚಿಂತನ್, ಕುಡ್ಲ ರ‍್ಯಾಂಪೇಜ್ ಅಜಯ್ ಅಂಚನ್, ಪತ್ರಕರ್ತರಾದ ಕನ್ನಡ ಪ್ಲಾನೆಟ್ ದಿನೇಶ್ ಕುಮಾರ್ ದಿನೂ, V4 ನ್ಯೂಸ್‌ನ ಲಕ್ಷ್ಮಣ್ ಕುಂದರ್, ಪೀಪಲ್ ಮೀಡಿಯಾದ ಸುರಭಿ ರೇಣುಕಾಂಬಿಕೆ, ಪ್ರಸ್ತುತ ನ್ಯೂಸ್‌ನ ಬಶೀರ್ ಅಡ್ಯನಡ್ಕ, ಸನ್ಮಾರ್ಗ ನ್ಯೂಸ್‌ನ ಆರ್ ಎ ಲೋಹಾನಿ, ಆಶಾ ಮುಸ್ಸಂಜೆ ಸಮಯ, ಪೊಲೀಸ್ ವಾಣಿ ರಾಘವೇಂದ್ರಚಾರಿ, ದ ಪಾಲಿಟಿಕ್‌ನ ಸಿದ್ದಪ್ಪ ಮೂಲಗೆ, ಜನಶಕ್ತಿ ಮೀಡಿಯಾದ ಗುರುರಾಜ್ ದೇಸಾಯಿ, ತ್ರಿವರ್ಣ ನ್ಯೂಸ್ ಉಮರ್ ಫಾರೂಕ್, ಜಗದೀಶ್ ಕನ್ನಡ ಜಾಣ ಜಾಣೆಯರು, ಕನ್ನಡ ವನ್‌ನ ಭಾಗ್ಯನಾರಾಯಣ ಬೊಗ್ಗವರಪು, ಗೌರಿ ಮೀಡಿಯಾದ ಚಂದ್ರು ತರಹುಣಸೆ, ದೊಡ್ಡಿಪಾಳ್ಯ ನರಸಿಂಹ ಮೂರ್ತಿ, ಡಾ. ವಾಸು ಎಚ್ ವಿ, ಹೇಮಾ ವೆಂಕಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.