ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಅನಾಮಿಕ ವ್ಯಕ್ತಿಯ ವಿಚಾರಣೆ ಇಂದು ಎಸ್ಐಟಿ ಅಧಿಕಾರಿಗಳಿಂದ ನಡೆಸಲಾಗಿದೆ. ಶವಗಳನ್ನು ಹೂತಿಟ್ಟ ಸ್ಥಳಗಳನ್ನು ಬಹಿರಂಗಪಡಿಸಲು ದೂರುದಾರ ಸಿದ್ಧ ಎಂದು ಹೇಳಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆಯೂ ಎಸ್ಐಟಿ ಪ್ರಶ್ನೆ ಮಾಡಲಿದೆ.
ಮಂಗಳೂರು/ಉಡುಪಿ (ಜು.26): ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಎಸ್ಐಟಿ ವಿಚಾರಣೆ ತೀವ್ರಗೊಂಡಿದೆ. ಅನಾಮಿಕ ವ್ಯಕ್ತಿಯ (anonymous complainant) ಮುಸುಕು ತೆರವುಗೊಳಿಸಿ ಇಂದು ವಿಚಾರೆ ನಡೆಸಲಾಗಿದೆ. ಅನಾಮಿಕ ವ್ಯಕ್ತಿಯ ಜೊತೆ ಬಂದಿರುವ ಇಬ್ಬರು ವಕೀಲರು ಕೂಡ ಆಗಮಿಸಿದ್ದಾರೆ. ಓರ್ವ ಪುರುಷ ಹಾಗೂ ಮಹಿಳಾ ವಕೀಲೆ ಜೊತೆ ದೂರುದಾರ ವಿಚಾರಣೆಗೆ ಆಗಮಿಸಿದ್ದರು. ವಕೀಲರನ್ನು ಪ್ರತ್ಯೇಕವಾಗಿ ಕುಳ್ಳಿರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಕೋರ್ಟ್ ಮುಂದೆ ದೂರುದಾರ 164 ಹೇಳಿಕೆ ನೀಡಿದ್ದಾರೆ.
ಈಗ ಮೊದಲ ಬಾರಿಗೆ ಎಸ್ಐಟಿ ಪೊಲೀಸರ ಮುಂದೆ ಮಾಹಿತಿ ಬಹಿರಂಗ ಮಾಡಿದ್ದಾರೆ. ಎಲ್ಲೆಲ್ಲಿ ಶವ ಹೂತಿಟ್ಟಿದ್ದೇನೆ ಎನ್ನುವುದನ್ನು ಬಹಿರಂಗಪಡಿಸಲು ತಾನು ಸಿದ್ದ ಎಂದು ಹೇಳಿದ್ದಾನೆ. ಹೂತಿಟ್ಟ ಶವಗಳ ಮಹಜರಿಗೂ ಮುನ್ನ ಮಹತ್ವದ ತನಿಖೆ ನಡೆಯಲಿದೆ.
ಅನಾಮಿಕನ ಇತಿಹಾಸ ತಿಳಿಯಲು ಮುಂದಾದ ಎಸ್ಐಟಿ
ವಿಚಾರಣೆಯ ವೇಳೆ ಎಸ್ಐಟಿ ಅನಾಮಿಕನ ಇತಿಹಾಸ ತಿಳಿಯಲು ಕೂಡ ಮುಂದಾಗಿದೆ. ಅದರೊಂದಿಗೆ ಶವಗಳ ಮೇಲಿನ ಲೈಂಗಿಕ ಆಕ್ರಮಣದ ಬಗ್ಗೆ ಎಸ್ಐಟಿ ಪ್ರಶ್ನೆ ಮಾಡಲಿದೆ.
ಅನಾಮಿಕನಿಗೆ ಕೇಳಿರುವ ಪ್ರಶ್ನೆಗಳು: ಹೂತ ಶವಗಳು ಅನುಮಾನಸ್ಪದವಾಗಿಯೇ ಕಂಡಿದ್ದು ಯಾಕೆ? ಪತ್ತೆಯಾದ ಮೃತದೇಹಗಳು ಯಾವ ಸ್ಥಿತಿಯಲ್ಲಿತ್ತು? ಯಾವುದೇ ಪೊಲೀಸ್ ಪ್ರಕ್ರಿಯೆ ಮಾಡದೆ ಹೆಣ ಹೂಳಲಾಗಿತ್ತಾ? ಲೈಂಗಿಕ ಅಕ್ರಮಣವಾಗಿರೋದು ಸ್ಪಷ್ಟವಾಗಿ ಕಾಣಿಸುತ್ತಿತ್ತಾ? ನೀವು ಅವುಗಳ ಮೇಲೆ ಲೈಂಗಿಕ ಆಕ್ರಮಣ ನಡೆದಿದೆ ಎಂದು ಹೇಗೆ ಹೇಳುತ್ತೀರಿ? ಲೈಂಗಿಕ ಆಕ್ರಮಣ ಎಂದು ಹೇಳಲು ಯಾವ ಗುರುತುಗಳನ್ನು ಮೃತದೇಹದ ಮೇಲೆ ಗುರುತಿಸಿದ್ದೀರಿ? ಅನುಮಾನಾಸ್ಪದ ಶವಗಳ ಬಗ್ಗೆ ಪೊಲೀಸರಿಗೆ ಯಾಕೆ ಮಾಹಿತಿ ನೀಡಲಿಲ್ಲ? ಪೊಲೀಸರಿಗೆ ಮಾಹಿತಿ ಇದ್ದೂ ಸುಮ್ಮನಿದ್ರಾ? ಈ ರೀತಿ ಶವ ಹೂತು ಹಾಕಲು ಸೂಚನೆ ನೀಡಿದ್ದು ಯಾರು? ಎನ್ನುವ ಪ್ರಶ್ನೆಗಳನ್ನು ಕೇಳಲಿದೆ.

2010ರ ಘಟನೆಯ ಬಗ್ಗೆ ಪ್ರಶ್ನೆ: ಅದರೊಂದಿಗೆ ಧರ್ಮಸ್ಥಳ ಶವ ಹೂತ ಕೇಸ್ ನಲ್ಲಿ ದೂರುದಾರನಿಗೆ ಎಸ್ಐಟಿಯಿಂದ 2010ರ ಘಟನೆ ಬಗ್ಗೆ ಪ್ರಶ್ನೆ ಮಾಡಲಿದೆ. ದೂರಿನಲ್ಲಿ 2010ರ ಘಟನೆಯನ್ನೂ ಅನಾಮುಕ ಉಲ್ಲೇಖ ಮಾಡಿದ್ದ. ಶಾಲಾ ಸಮವಸ್ತ್ರದ ಹುಡುಗಿಯ ಮೇಲೆ ಲೈಂಗಿಕ ಆಕ್ರಮಣದ ಉಲ್ಲೇಖ ಮಾಡಿದ್ದ. ಇದೇ ಘಟನೆ ಬಗ್ಗೆ ಹಲವು ಪ್ರಶ್ನೆಗಳನ್ನು ಎಸ್ಐಟಿ ಟೀಮ್ ಮುಂದಿಡಲಿದೆ.

ಆ ದಿನ ನಿಮಗೆ ಆ ಸ್ಥಳಕ್ಕೆ ಹೋಗುವ ಸೂಚನೆ ಯಾರಿಂದ ದೊರೆಯಿತು? ಆ ಮೇಲ್ವಿಚಾರಕರ ಹೆಸರು ಏನು? ಅವರು ಈಗ ಎಲ್ಲಿದ್ದಾರೆ, ಈ ಬಗ್ಗೆ ಮಾಹಿತಿ ಇದ್ಯಾ? ಆ ಹುಡುಗಿಯನ್ನು ನೀವು ಮೊದಲ ಬಾರಿ ಎಲ್ಲಿ ನೋಡಿದ್ದು? ದೇಹದ ಸ್ಥಿತಿ ಹೇಗಿತ್ತು? ಅವಳಲ್ಲಿ ಏನೇನು ಗಾಯದ ಗುರುತುಗಳು ಇತ್ಯಾದಿ ನೀವು ಗಮನಿಸಿದ್ದೀರಾ? ಆ ವೇಳೆ ಬೇರೆ ಯಾರಾದರೂ ಆ ಸ್ಥಳದಲ್ಲಿ ಇದ್ದರಾ? ಅವಳ ಶಾಲಾ ಬ್ಯಾಗ್ ಒಳಗೊಂಡಿದ್ದ ವಸ್ತುಗಳು ಏನೆಂದು ನೀವು ಗಮನಿಸಿದ್ದೀರಾ? ಬ್ಯಾಗಿನಲ್ಲಿ ಶಾಲಾ ಐಡಿ ಅಥವಾ ಹೆಸರು ಇತ್ತೇ? ಹುಡುಗಿಯನ್ನು ಹೂತ ಸ್ಥಳ ಯಾವ ರೀತಿಯ ಭೂಮಿ ಅಂದರೆ ಅರಣ್ಯವೇ ಅಥವಾ ಸಾಮಾನ್ಯ ಪ್ರದೇಶವೇ? ಮೃತದೇಹ ಹೂತ ನಂತರ ಈ ಘಟನೆ ಬಗ್ಗೆ ನೀವು ಯಾವುದೇ ವ್ಯಕ್ತಿಗೆ ಮಾಹಿತಿ ನೀಡಿದ್ದೀರಾ? ಈ ಬಗ್ಗೆ FIR ಅಥವಾ ಪೊಲೀಸ್ ದೂರು ದಾಖಲಾದ ಬಗ್ಗೆ ಮಾಹಿತಿ ಇದ್ಯಾ? ಈ ಘಟನೆ ಯಾವ ತಿಂಗಳು, ದಿನದ ಯಾವ ಸಮಯ? ನಡೆದಿತ್ತು ಎನ್ನುವ ಪ್ರಶ್ನೆಗಳನ್ನು ಕೇಳಲಿದೆ.