
ಜೆಟ್ ವಿಮಾನವೊಂದು ಆಕಾಶದಿಂದ ರಸ್ತೆಗೆ ರಭಸವಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಬೆಂಕಿಯಲ್ಲಿ ದಹನಗೊಂಡಿದ್ದಾರೆ. ಈ ಘಟನೆಯೂ ಉತ್ತರ ಇಟಲಿಯ ಬ್ರೆಸಿಯಾದ ಹೆದ್ದಾರಿಯೊಂದರಲ್ಲಿ ನಡೆದಿದೆ.
ಜೆಟ್ ವಿಮಾನದಲ್ಲಿ ಮೃತಪಟ್ಟವರನ್ನು ಮಿಲಾನ್ ನಗರದ ವಕೀಲ ಹಾಗೂ ಪೈಲಟ್ ಸೆರ್ಗಿಯೋ ರಾವಗ್ಲಿಯಾ (75), ಆನ್ ಮಾರಿಯಾ ಡಿ ಸ್ಟೆಫಾನೊ (60) ಎಂದು ಗುರುತಿಸಲಾಗಿದೆ. ಫ್ರೀಸಿಯಾ ಆರ್‌ಜಿ ಅಲ್ಟ್ರಾಲೈಟ್ ಜೆಟ್ ವಿಮಾನವು ಆಕಾಶದಿಂದ ವೇಗವಾಗಿ ಬಂದು ರಸ್ತೆಗೆ ಅಪ್ಪಳಿಸಿದೆ. ಇದರಿಂದ ಒಳಗಿದ್ದ ಇಬ್ಬರು ಕೊನೆಯುಸಿರೆಳೆದಿದ್ದಾರೆ.

ಹೆದ್ದಾರಿ ಮೇಲೆ ಬೀಳುತ್ತಿದ್ದಂತೆ ಜೆಟ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಧಗಧಗ ಹೊತ್ತಿ ಉರಿದಿದೆ. ಇದೇ ವೇಳೆ ರಸ್ತೆಯಲ್ಲಿ ವೇಗವಾಗಿ ತೆರಳುತ್ತಿದ್ದ 2 ಕಾರುಗಳು ಬೆಂಕಿಯಲ್ಲಿ ಹಾಗೇ ಮುಂದೆ ಸಾಗಿವೆ. ಆದರೆ ಯಾವುದೇ ಕಾರು ಅಪಘಾತ ಸಂಭವಿಸಿಲ್ಲ. ಇನ್ನೊಂದು ಕಾರು ಬೆಂಕಿ ಸಮೀಪಕ್ಕೆ ಹೋಗಿ ದಟ್ಟ ಹೊಗೆಯಲ್ಲಿ ಕಾಣದಂತೆ ಮುಳುಗಿ ಹೋಗಿದೆ. ಬಳಿಕ ಹಿಂದೆ ಬಂದು ಕಾರಿನಲ್ಲಿದ್ದವರು ಜೀವ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆಕಾಶದಿಂದ ಜೆಟ್ ವಿಮಾನ ಬೀಳುತ್ತಿರುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಮಾನ ಬಿದ್ದು ಕ್ಷಣಾರ್ಧದಲ್ಲೇ ಭಸ್ಮಗೊಂಡಿರುವುದು ನೋಡುಗರ ಎದೆ ನಡುಗಿಸುತ್ತದೆ. ವಿಮಾನವನ್ನ ತುರ್ತು ಭೂಸ್ಪರ್ಶಕ್ಕೆ ಪ್ರಯತ್ನಿಸುತ್ತಿದ್ದರು. ಆದರೆ ವಿಮಾನ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಪಘಾತಕ್ಕೀಡಾಯಿತು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.